ಪಾಲಿಕೆಗೆ ಬಾರದ ಸರ್ಕಾರದ ಅನುದಾನ; ಕಚೇರಿಗಳಿಂದ ತೆರಿಗೆ!

| Published : Mar 27 2025, 01:01 AM IST

ಸಾರಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅತ್ತ ನೌಕರರ ಸಂಬಳಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇತ್ತ ತೆರಿಗೆ ಕೂಡ ಸರಿಯಾಗಿ ವಸೂಲಿಯಾಗುತ್ತಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅತ್ತ ನೌಕರರ ಸಂಬಳಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇತ್ತ ತೆರಿಗೆ ಕೂಡ ಸರಿಯಾಗಿ ವಸೂಲಿಯಾಗುತ್ತಿಲ್ಲ. ಸಾರ್ವಜನಿಕರು ಒತ್ತಟ್ಟಿಗಿರಲಿ. ಸರ್ಕಾರದ ವಿವಿಧ ಇಲಾಖೆಗಳೇ ಕೋಟಿಗಟ್ಟಲೇ ತೆರಿಗೆ ಹಣವನ್ನು ಬಾಕಿಯುಳಿಸಿಕೊಂಡಿವೆ. ವಸೂಲಿಗೆ ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದೆ.

ಪಾಲಿಕೆ ಸಿಬ್ಬಂದಿ ಸಾರ್ವಜನಿಕರ ತೆರಿಗೆ ಅಷ್ಟೋ ಇಷ್ಟೋ ವಸೂಲಿ ಮಾಡಿಕೊಳ್ಳುತ್ತ ಬರುತ್ತಿದೆ. ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ ₹130 ಕೋಟಿ ಸಾರ್ವಜನಿಕರಿಂದ ವಸೂಲಿ ಮಾಡಿದೆ. ಕೆಲ ಖಾಸಗಿ ವ್ಯಕ್ತಿಗಳ ದೊಡ್ಡ ದೊಡ್ಡ ಕಟ್ಟಡಗಳ ತೆರಿಗೆ ಕೂಡ ಕೋಟಿಗಟ್ಟಲೇ ಉಳಿದಿದೆ. ಇದಕ್ಕಾಗಿ ನೋಟಿಸ್‌ ನೀಡುವುದು. ಅವರ ಕಟ್ಟಡಗಳಿಗೆ ಬೀಗ ಜಡಿಯುವ ಕೆಲಸವನ್ನು ಪಾಲಿಕೆ ಸಿಬ್ಬಂದಿ ಮಾಡುತ್ತಿದ್ದಾರೆ. ತೆರಿಗೆ ವಸೂಲಿಗಾಗಿಯೇ ಕಂದಾಯ ವಿಭಾಗವೂ ಪ್ರತ್ಯೇಕ ತಂಡವನ್ನು ರಚಿಸಿದೆ. ಆದರೆ, ಸರ್ಕಾರದ ವಿವಿಧ ಇಲಾಖೆಗಳೇ ಕೋಟಿಗಟ್ಟಲೇ ತೆರಿಗೆ ಹಣವನ್ನು ಬಾಕಿಯುಳಿಸಿಕೊಂಡಿವೆ. ಖಾಸಗಿ ಕಟ್ಟಡಗಳ ವಿಷಯದಲ್ಲಿ ತೆಗೆದುಕೊಂಡಂತಹ ನಿರ್ಧಾರ ಸರ್ಕಾರಿ ಇಲಾಖೆಗಗೆ ಕೆಲಸ ಮಾಡುತ್ತಿಲ್ಲ ಎಂಬ ಅಳಲು ಪಾಲಿಕೆ ಅಧಿಕಾರಿ ವರ್ಗದ್ದು. ಆದರೂ ಪಾಲಿಕೆ ಸಂಬಂಧಪಟ್ಟ ಇಲಾಖೆಗಳಿಗೂ ನೋಟಿಸ್‌ ಕೂಡ ನೀಡಿದೆ.

ಎಷ್ಟೆಷ್ಟಿದೆ?

ಕೇಂದ್ರ ಸರ್ಕಾರದ ಆಧೀನದಲ್ಲಿನ ಬಿಎಸ್‌ಎನ್‌ಎಲ್‌ ಕಚೇರಿಯಿಂದ ₹64 ಲಕ್ಷ, ಅಂಚೆ ಕಚೇರಿಯಿಂದ ₹52 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ₹80 ಲಕ್ಷ ತೆರಿಗೆ ಬರಬೇಕಿದೆ. ಬರೀ ಈ ಕಚೇರಿಗಳಿಂದಷ್ಟೇ ಅಲ್ಲ. ಸಾಕಷ್ಟು ಸರ್ಕಾರಿ ಕಚೇರಿಗಳಿಂದ ಬರಬೇಕಿದೆ. ಆದರೆ ಅವುಗಳದ್ದು 10, 5, 3 ಲಕ್ಷ ತೆರಿಗೆ ಬಾಕಿಯಿದೆ. ಎಲ್ಲ ಕಚೇರಿಗಳಿಗೂ ಆದಷ್ಟು ಬೇಗನೆ ತೆರಿಗೆ ಪಾವತಿಸಿ ಎಂಬ ಒಕ್ಕಣೆಯ ನೋಟಿಸ್‌ ಹೋಗಿದೆ.

ತೆರಿಗೆ ವಸೂಲಿ ಮಾಡಲು ಪ್ರತ್ಯೇಕ ತಂಡ ಮಾಡಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಏಪ್ರಿಲ್‌ನೊಳಗೆ ತೆರಿಗೆ ಸಂಗ್ರಹದಲ್ಲಿ ಸಾಕಷ್ಟು ಸಾಧನೆ ಮಾಡುತ್ತೇವೆ ಎಂಬ ವಿಶ್ವಾಸ ಅಧಿಕಾರಿಗಳದ್ದು.

ಸರ್ಕಾರದ ಅನುದಾನ

ಇನ್ನು ಸರ್ಕಾರದಿಂದಲೂ ಬರೋಬ್ಬರಿ ₹290 ಕೋಟಿ ವಿವಿಧ ವಿಷಯಗಳ ಅನುದಾನ ಬರುವುದು ಬಾಕಿಯಿದೆ. ನೌಕರರಿಗೆ ವೇತನಕ್ಕಾಗಿ ಸರ್ಕಾರ ಅನುದಾನವನ್ನೇ ನೀಡಿಲ್ಲ. ನೌಕರರಿಗೆ 3 ತಿಂಗಳಿಂದ ಸಂಬಳವೇ ಸಿಕ್ಕಿಲ್ಲ. ಅದೇ ₹21 ಕೋಟಿ ಇದೆ. ಇನ್ನು 7ನೇ ವೇತನ ಆಯೋಗದ ವ್ಯತ್ಯಾಸದ ಅನುದಾನ ಸೇರಿ ಒಟ್ಟು ₹49.49 ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ₹22.45 ಕೋಟಿ, ಎಸ್‌ಎಫ್‌ಸಿ (ಎಸ್ಸಿಎಸ್‌ಪಿ) ₹7.79 ಕೋಟಿ, ಟಿಎಸ್‌ಪಿ ₹2.73 ಕೋಟಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ₹48, ಪಿಂಚಣಿ ಬಾಕಿ ₹52.95ಕೋಟಿ, ಪಿಕೆಜಿಬಿವೈ ₹8.12, ಅಮೃತ ಯೋಜನೆಯ ₹1.5ಕೋಟಿ, 15ನೆಯ ಹಣಕಾಸು ಅನುದಾನದ ₹42.83 ಕೋಟಿ ಸೇರಿದಂತೆ ಸರ್ಕಾರದಿಂದ ₹290 ಕೋಟಿ ಅನುದಾನ ಬರಬೇಕಿದೆ.

ಸ್ಪಂದನೆ ಇಲ್ಲ

ಅತ್ತ ವಿವಿಧ ಇಲಾಖೆಗಳಿಂದ ಬರಬೇಕಾದ ತೆರಿಗೆ ಹಣವೂ ಬರುತ್ತಿಲ್ಲ. ಅದಕ್ಕೂ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಇನ್ನು ಸರ್ಕಾರದಿಂದ ₹290 ಕೋಟಿ ಅನುದಾನ ನೀಡುವ ವಿಷಯವಾಗಿ ಮುಖ್ಯಮಂತ್ರಿ, ಜಿಲ್ಲಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾಗಿದೆ. ಆದರೂ ಪ್ರಯೋಜನ ಮಾತ್ರ ಶೂನ್ಯ ಎಂಬಂತಾಗಿದೆ. ಸರ್ಕಾರದಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂಬುದು ಆಡಳಿತ ಮಂಡಳಿ ಸ್ಪಷ್ಟನೆ. ಸರ್ಕಾರದಿಂದ ಅನುದಾನ ಸಿಗದೇ ಇದ್ದರೆ ಪಾಲಿಕೆಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂಬ ಮಾತು ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಅವರದ್ದು. ಇನ್ನಾದರೂ ಸರ್ಕಾರ ಅನುದಾನ ನೀಡಲಿ. ವಿವಿಧ ಇಲಾಖೆಗಳು ತಾವು ಕಟ್ಟಬೇಕಿರುವ ತೆರಿಗೆ ಹಣವನ್ನು ನೀಡಿ ಪಾಲಿಕೆ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.ವಿಮಾನ ನಿಲ್ದಾಣದ್ದು ಬಾಕಿ

ವಿಮಾನ ನಿಲ್ದಾಣದಿಂದಲೂ ₹58 ಲಕ್ಷ ತೆರಿಗೆ ಬರಬೇಕಿದೆ. ಆದರೆ ಇಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ಭೂಸ್ವಾಧೀನ ಪಡಿಸಿಕೊಂಡ ಬಳಿಕ ನೀಡಬೇಕಿರುವ ತೆರಿಗೆ ಇದು. ಅಂದರೆ ಏರ್‌ಪೋರ್ಟ್‌ ಅರ್ಥಾರಿಟಿಗೆ ಹಸ್ತಾಂತರವಾಗುವ ಮುನ್ನವೇ ಪಾವತಿಸಬೇಕಿರುವ ತೆರಿಗೆಯ ಹಣ. ಏರ್‌ಪೋರ್ಟ್‌ ಅರ್ಥಾರಿಟಿ ತಮಗೆ ಹಸ್ತಾಂತರವಾದ ನಂತರದ್ದು ತೆರಿಗೆ ಪಾವತಿಸುತ್ತದೆ. ಅದಕ್ಕಿಂತಲೂ ಮುಂಚೆನದು ಅದು ಪಾವತಿಸಲು ಸಿದ್ಧವಿಲ್ಲ. ಹೀಗಾಗಿ ತಾಂತ್ರಿಕ ಸಮಸ್ಯೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ ಅಶೋಕ ಅವರು ತಿಳಿಸುತ್ತಾರೆ.

ಕಟ್ಟುನಿಟ್ಟಿನ ಕ್ರಮ

ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸಿಬ್ಬಂದಿ ನೋಟಿಸ್‌ ನೀಡಿ ವಸೂಲಿ ಮಾಡುತ್ತಿದ್ದಾರೆ. ಇನ್ಮೇಲೆ ಸುಧಾರಣೆ ಕಾಣಲಿದೆ.

- ರುದ್ರೇಶ ಘಾಳಿ, ಆಯುಕ್ತರು, ಮಹಾನಗರ ಪಾಲಿಕೆನೋಟಿಸ್‌

ಬಿಎಸ್‌ಎನ್‌ಎಲ್‌, ಪಿಡಬ್ಲುಡಿ, ಅಂಚೆಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಂದ ತೆರಿಗೆ ಹಣ ಬರುವುದು ಬಾಕಿಯಿದೆ. ನೋಟಿಸ್‌ ನೀಡಲಾಗಿದೆ. ಶೀಘ್ರದಲ್ಲೇ ಪಾವತಿಯಾಗುವ ಸಾಧ್ಯತೆ ಇದೆ.

- ಅಶೋಕ, ಅಧಿಕಾರಿಗಳು, ಕಂದಾಯ ವಿಭಾಗ, ಪಾಲಿಕೆ