ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲಿ: ಎಂ.ಎನ್. ಕಾಂತರಾಜು

| Published : May 18 2025, 01:17 AM IST

ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲಿ: ಎಂ.ಎನ್. ಕಾಂತರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಗೃಹ ಜ್ಯೋತಿ ಬಗ್ಗೆ ಮಾಹಿತಿ ನೀಡಿದ ಬೆಸ್ಕಾಂ ಇಲಾಖೆಯ ಎಂ. ವೆಂಕಟೇಶ್, ತಾಲೂಕಿನಲ್ಲಿ ಶೇ. 94ರಷ್ಟು ಯಶಸ್ವಿಯಾಗಿದ್ದು, 62 ಸಾವಿರಕ್ಕೂ ಹೆಚ್ಚು ನೋಂದಾಯಿಸಿದ ಗೃಹ ಬಳಕೆಯ ಫಲಾನುಭವಿಗಳಿದ್ದಾರೆ. ಸರ್ಕಾರದ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಲಾಗುತ್ತಿದ್ದು, ಆಧಾರ್‌ಕಾರ್ಡ್ ನೀಡಿದರೆ ನಾವೇ ನೋಂದಾಯಿಸಿಕೊಳ್ಳುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿದ್ದು, ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗೆ ಒಳಪಡುವ ಅಧಿಕಾರಿಗಳು, ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡುವ ಮೂಲಕ ಯೋಜನೆಯ ಫಲ ಅರ್ಹರಿಗೆ ತಲುಪುವಂತೆ ಮಾಡಬೇಕೆಂದು ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಎನ್. ಕಾಂತರಾಜು ತಿಳಿಸಿದರು.

ನಗರದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾಗಿದ್ದು, ಆದರೆ ತಾಲೂಕಿನಲ್ಲಿ ಕೆಲವರಿಗೆ ಈ ಯೋಜನೆಗಳ ಫಲ ದೊರಕುತ್ತಿಲ್ಲ. ಇನ್ನೂ ಅನೇಕ ಕಡೆಗಳಲ್ಲಿ ನಮಗೆ ದೂರುಗಳು ಕೇಳಿ ಬರುತ್ತಿದ್ದು, ನೇಮಕಗೊಂಡಿರುವ ಸದಸ್ಯರು ಹಾಗೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗುತ್ತಿದ್ದು, ಅಂತಹವರನ್ನು ಗುರುತಿಸಿ ಅಗತ್ಯ ದಾಖಲಾತಿಗಳನ್ನು ಪಡೆದು ಅವರಿಗೆ ಹಣ ಬರುವಂತೆ ಮಾಡಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಬಹುಪಾಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ್ದು, ಇಲ್ಲಿನ ಅಧಿಕಾರಿಗಳು ವಂಚಿತರಾದ ಮಹಿಳೆಯರಿಗೆ ಸರ್ಕಾರದಿಂದ ಹಣ ಬರುವಂತೆ ಮಾಡಿಸಬೇಕು. ಕುಟುಂಬದ ಯಜಮಾನಿ ನಿಧನ ಹೊಂದಿದರೆ ಗೃಹಲಕ್ಷ್ಮೀ ಹಣ ಯಾರಿಗೆ ಬರುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಮಹಿಳೆಯರಿಂದ ದೂರುಗಳು ಬರುತ್ತಿವೆ. ಈ ಬಗ್ಗೆ ಸಿಡಿಪಿಓ ಇಲಾಖೆ, ಗ್ಯಾರಂಟಿ ಸಮಿತಿ ಸದಸ್ಯರು ಕ್ರಮವಹಿಸಬೇಕು. ತಾಲೂಕಿನಲ್ಲಿ ಒಟ್ಟು 53,436 ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಫಲ ಪಡೆದುಕೊಳ್ಳುತ್ತಿದ್ದು, 1031 ಜನರು ಐಟಿ, ಜಿಎಸ್‌ಟಿಗೆ ಒಳಪಟ್ಟಿರುವ ಕಾರಣ ಅವರು ಅರ್ಹರಿರುವುದಿಲ್ಲ. ಮುಂದಿನ ದಿನಗಳಲ್ಲಿ ಶೇ.99ರಷ್ಟು ಈ ಯೋಜನೆ ತಲುಪಬೇಕಿದ್ದು, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಸಬೇಕೆಂದರು.

ಅನ್ನಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದ ಆಹಾರ ಇಲಾಖೆಯ ನಿರೀಕ್ಷಕಿ ರೇಣುಕಾ ಪ್ರಸಾದ್, ತಾಲೂಕಿನಲ್ಲಿ 77 ನ್ಯಾಯಬೆಲೆ ಅಂಗಡಿಗಳಿದ್ದು 61 ಸಾವಿರಕ್ಕೂ ಹೆಚ್ಚು ಪಡಿತರದಾರರಿದ್ದು, ಸರ್ಕಾರದ ಆದೇಶದಂತೆ ಅನ್ನಭಾಗ್ಯ ಡಿಬಿಟಿ ಯೋಜನೆಯಡಿ ಹಣ ಜಮೆ ಮಾಡುವುದರ ಬದಲಾಗಿ ಫೆಬ್ರವರಿ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಅಕ್ಕಿ ವಿತರಿಸಲಾಗಿದೆ ಎಂದರು.

ಅದಕ್ಕೆ ತಾಪಂ ಇಒ ಮಾತನಾಡಿ, ಕೆಲವರಿಗೆ ಬಯೋಮೆಟ್ರಿಕ್ ಸಮಸ್ಯೆಯಿಂದ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ನ್ಯಾಯಬೆಲೆ ಅಂಗಡಿಗಳಿಗೆ ಐ ಸ್ಕ್ಯಾನರ್ ಅಳವಡಿಸುವಂತೆ ಸೂಚಿಸಿದರು.

ಗೃಹ ಜ್ಯೋತಿ ಬಗ್ಗೆ ಮಾಹಿತಿ ನೀಡಿದ ಬೆಸ್ಕಾಂ ಇಲಾಖೆಯ ಎಂ. ವೆಂಕಟೇಶ್, ತಾಲೂಕಿನಲ್ಲಿ ಶೇ. 94ರಷ್ಟು ಯಶಸ್ವಿಯಾಗಿದ್ದು, 62 ಸಾವಿರಕ್ಕೂ ಹೆಚ್ಚು ನೋಂದಾಯಿಸಿದ ಗೃಹ ಬಳಕೆಯ ಫಲಾನುಭವಿಗಳಿದ್ದಾರೆ. ಸರ್ಕಾರದ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಲಾಗುತ್ತಿದ್ದು, ಆಧಾರ್‌ಕಾರ್ಡ್ ನೀಡಿದರೆ ನಾವೇ ನೋಂದಾಯಿಸಿಕೊಳ್ಳುತ್ತೇವೆ ಎಂದರು.

ಯುವನಿಧಿ ಬಗ್ಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅರುಣ್‌ಕುಮಾರ್ , ಶಕ್ತಿ ಯೋಜನೆ ಬಗ್ಗೆ ಕೆ.ಎಸ್.ಆರ್‌ಟಿಸಿ ಲೆಕ್ಕಾಧಿಕಾರಿ ಹರೀಶ್ ಮಾಹಿತಿ ನೀಡಿದರು.

ಸಭೆಯಲ್ಲಿ ಪ್ರಭಾರ ಸಿಡಿಪಿಒ ದೀಪಾ ಹೆಬ್ಬಳ್ಳಿ, ಗ್ಯಾರಂಟಿ ಯೋಜನೆಯ ಸದಸ್ಯರಾದ ಲಲಿತಮ್ಮ, ದಿವ್ಯ ದಿನೇಶ್‌ಕುಮಾರ್, ಎಚ್.ಆರ್. ಮನೋಜ್, ಬಿ.ಸಿ. ನಿಜಗುಣಮೂರ್ತಿ, ಶಿವಲಿಂಗೇಗೌಡ, ಸಂತೋಷ್, ನರೇಂದ್ರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿ ವರ್ಗದವರು, ಸಿಬ್ಬಂದಿಯಿದ್ದರು.