ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಡಾ. ನವೀನ್‌ ಭಟ್‌ ಆಡಳಿತಾಧಿಕಾರಿ

| Published : Sep 12 2024, 02:00 AM IST

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಡಾ. ನವೀನ್‌ ಭಟ್‌ ಆಡಳಿತಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತ ವೈಫಲ್ಯ ಹಾಗೂ ಕಾರ್ಯನಿರ್ವಹಣೆ ಸುಧಾರಿಸುವ ಸಲುವಾಗಿ ಮತ್ತೆ 6 ತಿಂಗಳ ಅವಧಿಗೆ ಐಎಎಸ್‌ ಅಧಿಕಾರಿಯನ್ನೇ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದು, ಡಾ. ವೈ ನವೀನ್‌ ಭಟ್‌ ಅವರನ್ನು 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ಆಗಿ ನೇಮಿಸಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ನವೀನ್‌ ಭಟ್‌ ಅವರನ್ನು ಸಂಸ್ಥೆಯ ಆಡಳಿತಾಧಿಕಾರಿ ಆಗಿ ಪ್ರಭಾರ ಹುದ್ದೆಯಲ್ಲಿ ಇಟ್ಟು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿದೆ. ನೂತನ ಆಡಳಿತಾಧಿಕಾರಿ ನವೀನ್‌ ಭಟ್‌ ಬುಧವಾರ ಸಂಸ್ಥೆಗೆ ಭೇಟಿ ನೀಡಿ ಜವಾಬ್ದಾರಿ ಸ್ವೀಕರಿಸಿದರು ಎಂದು ತಿಳಿದುಬಂದಿದೆ.

ಕಿದ್ವಾಯಿ ಆಸ್ಪತ್ರೆಯಲ್ಲಿನ ನಿರ್ವಹಣೆ ವೈಫಲ್ಯ, ಅವ್ಯವಹಾರಗಳ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಖಜಾನೆ ಆಯುಕ್ತರಾಗಿದ್ದ ಡಾ. ಅರುಂಧತಿ ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು 2023ರ ಸೆ.16 ರಂದು ವಿಸ್ತೃತ ವರದಿ ನೀಡಿತ್ತು.

ಈ ವರದಿಯಲ್ಲಿ ನಿರ್ದೇಶಕರ ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತ ಅನುಭವಕ್ಕೆ ಆದ್ಯತೆ ನೀಡಬೇಕು. ಒಟ್ಟಾರೆ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆಗೆ ಐಎಎಸ್‌ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಬಹುದು ಎಂದು ಶಿಫಾರಸು ಮಾಡಿತ್ತು. ಇದೇ ವೇಳೆ ಸಂಸ್ಥೆಯನ್ನು ಸರಿದಾರಿಗೆ ತರಲು ಅಲ್ಪ ಅವಧಿಗೆ ಒಬ್ಬರು ಐಎಎಸ್‌ ಅಧಿಕಾರಿಯನ್ನು ಆಡಳಿತಾಧಿಕಾರಿ ಆಗಿ ನೇಮಿಸಬೇಕು ಎಂದೂ ಹೇಳಿತ್ತು.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಎನ್‌. ಮಂಜುಶ್ರೀ ಅವರನ್ನು ಫೆಬ್ರವರಿಯಲ್ಲಿ 6 ತಿಂಗಳ ಅವಧಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಡಳಿತಾಧಿಕಾರಿ ಆಗಿ ನೇಮಿಸಲಾಗಿತ್ತು. ಇದೀಗ ಅವರ ಅವಧಿ ಮುಗಿದಿದ್ದು, ಆಡಳಿತಾಧಿಕಾರಿಗಳ ಸೇವೆಯನ್ನು ಮತ್ತೆ 6 ತಿಂಗಳು ವಿಸ್ತರಣೆ ಮಾಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಕೋರಿತ್ತು. ಈ ಹಿನ್ನೆಲೆ ಮುಂದಿನ 6 ತಿಂಗಳ ಅವಧಿಗೆ ನವೀನ್‌ ಭಟ್‌ ಅವರನ್ನು ಆಡಳಿತಾಧಿಕಾರಿ ಆಗಿ ನೇಮಿಸಲಾಗಿದೆ.