ಕಾಡಾನೆ ದಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜ ಸೇವಕ ಎಡಿಕೇರಿ ಪ್ರಸನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾಡಾನೆ ದಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಮಾಜ ಸೇವಕ ಎಡಿಕೇರಿ ಪ್ರಸನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಮವಾರ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ (53) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಕಾಡಾನೆ ದಾಳಿಯಿಂದ ಕೊಡಗು ಜಿಲ್ಲೆಯಲ್ಲಿ ಜ.1ರಂದು ಶನಿವಾರಸಂತೆ ಸಮೀಪದ ಗಣಗೂರಿನಲ್ಲಿ ಪೊನ್ನಪ್ಪ (61), ಜ. 29ರಂದು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಕಾಫಿ ತೋಟದಲ್ಲಿ ಲತೀಫ್ (72), ಫೆ. 28ರಂದು ಮಡಿಕೇರಿ ತಾಲೂಕಿನ ಮದೆನಾಡುವಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜಾ (17) ಮೃತಪಟ್ಟಿದ್ದಾರೆ.
ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಹೀಗೆ ಮುಂದುವರಿದರೆ ಅಮಾಯಕ ಕಾರ್ಮಿಕರು ಕಾಡಾನೆ ದಾಳಿಗೆ ತುತ್ತಾಗುತ್ತಾರೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಂಡು ಶೀಘ್ರ ಕ್ರಮ ಕೈಗೊಳ್ಳಬೇಕು.ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಸಾರ್ವಜನಿಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡಲಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ, ಹುಲಿ ಹಾವಳಿ ನಿರಂತರವಾಗಿ ನಡೆಯುತ್ತಿದೆ. ಕಾಡಾನೆ ದಾಳಿಯಿಂದ ಅಪಾರ ಜನರು ಸಾಯುತ್ತಿದ್ದಾರೆ. ಹುಲಿ ದಾಳಿಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಮೃತಪಟ್ಟಿವೆ. ಹೀಗಿದ್ದರೂ ಈವರೆಗೆ ಕೊಡಗು ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡದಿರುವ ಬಗ್ಗೆ ಪ್ರಸನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರು ಆದಷ್ಟು ಬೇಗ ಕೊಡಗಿಗೆ ಭೇಟಿ ನೀಡಿ ವನ್ಯ ಜೀವಿಗಳ ಹಾವಳಿ ನಿಯಂತ್ರಿಸಲು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.