ಸರ್ಕಾರ ಕೆ.ಆರ್.ಪೇಟೆ ಕ್ಷೇತ್ರಕ್ಕೆ 120 ಕೋಟಿ ರು. ಅನುದಾನ ನೀಡಿದೆ: ಚಲುವರಾಯಸ್ವಾಮಿ

| Published : Apr 08 2025, 12:30 AM IST

ಸರ್ಕಾರ ಕೆ.ಆರ್.ಪೇಟೆ ಕ್ಷೇತ್ರಕ್ಕೆ 120 ಕೋಟಿ ರು. ಅನುದಾನ ನೀಡಿದೆ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಕೋಟಿ ರು, ಈ ಯೋಜನೆಯಿಂದ ತಾಲೂಕಿನ 63 ಕೆರೆಗಳು ಹೇಮಾವತಿ ನೀರಿನಿಂದ ತುಂಬಲಿದೆ. ನಾಗಮಂಗಲ ಕ್ಷೇತ್ರಕ್ಕೂ ಹೇಮೆ ನೀರನ್ನು ತೆಗೆದುಕೊಳ್ಳಲು 80 ಕೋಟಿ ರು. ಅನುದಾನದ ಅಗತ್ಯವಿದ್ದು ಶೀಘ್ರ ಅದನ್ನು ಬಿಡುಗೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ 120 ಕೋಟಿ ರು. ಅನುದಾನ ನೀಡಿದೆ ಎಂದು ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಪಕ್ಷದಿಂದ ಆಯೋಜಿಸಿದ್ದ ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ, ಜಿಪಂ, ತಾಪಂ ಚುನಾವಣೆ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಕೋಟಿ ರು, ಈ ಯೋಜನೆಯಿಂದ ತಾಲೂಕಿನ 63 ಕೆರೆಗಳು ಹೇಮಾವತಿ ನೀರಿನಿಂದ ತುಂಬಲಿದೆ. ನಾಗಮಂಗಲ ಕ್ಷೇತ್ರಕ್ಕೂ ಹೇಮೆ ನೀರನ್ನು ತೆಗೆದುಕೊಳ್ಳಲು 80 ಕೋಟಿ ರು. ಅನುದಾನದ ಅಗತ್ಯವಿದ್ದು ಶೀಘ್ರ ಅದನ್ನು ಬಿಡುಗೆ ಮಾಡಲಾಗುವುದು. ಇದಲ್ಲದೇ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ 120 ಕೋಟಿ ರು. ಅನುದಾನ ನೀಡಲಾಗಿದೆ ಎಂದರು.

ಇಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎನ್ನುವ ಕೊರಗು ಕಾರ್ಯಕರ್ತರನ್ನು ಕಾಡುತ್ತಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿರಬೇಕು ಎನ್ನುವುದು ನನ್ನ ಗುರಿ. ಮುಂಬರುವ ತಾಪಂ, ಜಿಪಂ ಮತ್ತು ಗ್ರಾಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಮನ್ಮುಲ್ ನಿರ್ದೇಶರು ಕಾಂಗ್ರೆಸ್ ಸೇರಲಿ:

ಇತ್ತೀಚೆಗೆ ನಡೆದ ಮನ್ಮುಲ್ ಚುನಾವಣೆಯಲ್ಲಿ ಕೆ.ಆರ್.ಪೇಟೆ ವ್ಯಾಪ್ತಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಇರಲಿಲ್ಲ. ಅದ್ದರಿಂದ ಅನಿವಾರ್ಯವಾಗಿ ಶಾಸಕ ಹೆಚ್.ಟಿ.ಮಂಜು ವಿರುದ್ದ ಸ್ಪರ್ಧಿಸಿದ್ದ ಡಾಲು ರವಿ ಮತ್ತು ಎಂಬಿ.ಹರೀಶ್ ಅವರನ್ನು ಬೆಂಬಲಿಸಿ ಗೆಲ್ಲಿಸಿಕೊಳ್ಳಬೇಕಾಯಿತು ಎಂದರು.

ಇಬ್ಬರು ಮನ್ಮುಲ್ ನಿರ್ದೇಶರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಸೂಚಿಸಿದ್ದೇನೆ. ಇದರಲ್ಲಿ ಒಬ್ಬರು ಪಕ್ಷ ಸೇರ್ಪಡೆಯಗೆ ಸಕಾರಾತ್ಮವಾಗಿದ್ದರೆ ಮತ್ತೊಬ್ಬರು ಸ್ಪಷ್ಠ ನಿಲುವು ವ್ಯಕ್ತಪಡಿಸುತ್ತಿಲ್ಲ. ಇವರಿಗೆ ಕಾಲಾವಕಾಶ ನೀಡಿದ್ದೇನೆ. ಇವರು ನಿಗಧಿತ ಅವಧಿಯಲ್ಲಿ ಪಕ್ಷಕ್ಕೆ ಬಂದರೆ ಒಂದು ಬಹಿರಂಗ ಸಭೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇನೆ ಎಂದು ಸಚಿವರು ಪ್ರಕಟಿಸಿದರು.