ಹತ್ತಾರು ಬಾರಿ ಲಕ್ಕೂರು ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಮುಂದಾದರೂ ಕಾಣದ ವಿಘ್ನಗಳು ಎದುರಾಗುತ್ತಿದ್ದವು. ಈ ಬಾರಿ ಗ್ರಾಮದ ಕೆಲವು ಮುಖಂಡರು ನನ್ನನ್ನು ಬೆನ್ನತ್ತಿ ಶಾಲೆ ಮಂಜೂರಾತಿಗೆ ಶ್ರಮಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿಯೇ ಲಕ್ಕೂರು ಗ್ರಾಮಕ್ಕೆ ಮಾತ್ರ ಪ್ರೌಢಶಾಲೆ ಆರಂಭಕ್ಕೆ ಮಂಜೂರಾತಿ ಸಿಕ್ಕಿದೆ. ಮುಂದಿನ ವರ್ಷಗಳಲ್ಲಿ ಶಾಲೆಯನ್ನು ನಡೆಸಿಕೊಂಡು ಹೋಗುವ ಮನಸ್ಸನ್ನು ಜನರು ಮಾಡಬೇಕು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಸರ್ಕಾರಿ ಶಾಲೆಗಳೇ ಮುಚ್ಚುತ್ತಿರುವ ಈ ದಿನಗಳಲ್ಲಿ ಹೋಬಳಿಯ ಲಕ್ಕೂರು ಗ್ರಾಮದಲ್ಲಿ ನೂತನವಾಗಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿದೆ. ಹಾಗಾಗಿ ಶಾಲೆಯ ಉದ್ಘಾಟನಾ ಸಮಾರಂಭ ಲಕ್ಕೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.ಹೋಬಳಿಯ ಹನ್ಯಾಳು ಸರ್ಕಾರಿ ಪ್ರೌಢಶಾಲೆ ಹೊರತುಪಡಿಸಿದರೆ ರಾಗಿಮರೂರು ಗ್ರಾಮದಲ್ಲಿ ಅನುದಾನಿತ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಈ ಭಾಗದಲ್ಲಿ ಬರುವ ಹತ್ತಕ್ಕೂ ಹೆಚ್ಚಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಢಶಾಲೆಗೆ 2 ಕಿ.ಮೀ. ದೂರ ಸಂಚರಿಸಿ ರಾಗಿಮರೂರು ಅಥವಾ ಹನ್ಯಾಳು ಸರಕಾರಿ ಪ್ರೌಢಶಾಲೆಗೆ ಬರಬೇಕಿತ್ತು. ಹಲವು ಬಾರಿ ಲಕ್ಕೂರು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಆರಂಭಿಸುವಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನಪಟ್ಟರೂ ಅಡೆತಡೆಗಳು ಎದುರಾಗುತ್ತಿದ್ದವು. ಈ ಬಾರಿ ಶಾಸಕ ಎ.ಮಂಜು ಅವರ ದಿಟ್ಟ ಹೋರಾಟ ಮತ್ತು ಗ್ರಾಮಸ್ಥರ ಸಹಕಾರದಿಂದ ಜಿಲ್ಲೆಯಲ್ಲಿಯೇ ಈ ಸಾಲಿಗೆ ಏಕೈಕ ಲಕ್ಕೂರು ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆಯನ್ನು ಮಂಜೂರಾತಿ ಮಾಡಿಸಿ ಶಾಲೆಗೆ ಚಾಲನೆ ನೀಡಿದ್ದಾರೆ.ಲಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಕ್ಕೂ ಹೆಚ್ಚಿನ ಮಕ್ಕಳು ಇದ್ದು,7 ನೇತರಗತಿ ನಂತರ ದೂರದ ರಾಗಿಮರೂರು ಅಥವಾ ಹನ್ಯಾಳು ಶಾಲೆಗೆ ಬರಬೇಕಿತ್ತು. ಈಗ ಆ ಸಮಸ್ಯೆಗೆ ಪರಿಹಾರ ದೊರೆತಿದೆ. ಸುಮಾರು 30ಕ್ಕೂ ಹೆಚ್ಚಿನ ಮಕ್ಕಳು 8ನೇ ತರಗತಿಗೆ ಪ್ರವೇಶಾತಿ ಹೊಂದಿದ್ದಾರೆ. ಇಂದಿನ ಶಾಲಾ ಉದ್ಘಾಟನಾ ಸಮಾರಂಭದಲ್ಲಿ ಲಕ್ಕೂರು, ಕೊಪ್ಪಲು, ಸೋಮಪುರ, ಕೆರಗೋಡು ಗ್ರಾಮಗಳ ಮಕ್ಕಳು, ಪೋಷಕರು, ಸಾರ್ವಜನಿಕರು, ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನಾ ಶಾಲೆಯ 50ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಕಳಶಗಳನ್ನು ತಲೆ ಮೇಲೆ ಹೊತ್ತು ವಾದ್ಯದೊಂದಿಗೆ ಹೆಜ್ಜೆ ಹಾಕಿದರು. ಶಾಸಕ ಎ. ಮಂಜು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎ. ಮಂಜು ಅವರು, ಹತ್ತಾರು ಬಾರಿ ಲಕ್ಕೂರು ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಮುಂದಾದರೂ ಕಾಣದ ವಿಘ್ನಗಳು ಎದುರಾಗುತ್ತಿದ್ದವು. ಈ ಬಾರಿ ಗ್ರಾಮದ ಕೆಲವು ಮುಖಂಡರು ನನ್ನನ್ನು ಬೆನ್ನತ್ತಿ ಶಾಲೆ ಮಂಜೂರಾತಿಗೆ ಶ್ರಮಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲಿಯೇ ಲಕ್ಕೂರು ಗ್ರಾಮಕ್ಕೆ ಮಾತ್ರ ಪ್ರೌಢಶಾಲೆ ಆರಂಭಕ್ಕೆ ಮಂಜೂರಾತಿ ಸಿಕ್ಕಿದೆ. ಮುಂದಿನ ವರ್ಷಗಳಲ್ಲಿ ಶಾಲೆಯನ್ನು ನಡೆಸಿಕೊಂಡು ಹೋಗುವ ಮನಸ್ಸನ್ನು ಜನರು ಮಾಡಬೇಕು. ಮಕ್ಕಳ ಸಂಖ್ಯೆ ಇಳಿಕೆ ಕಂಡು ಶಾಲೆಗಳನ್ನು ಮುಚ್ಚುವ ಸಂದರ್ಭದಲ್ಲಿ ಕಷ್ಟಪಟ್ಟು ಈ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸಲಾಗಿದೆ. ಯಾವುದೇ ಆಸೆ ಆಮಿಷಗಳಿಗೆ ಜನರು ಮರುಳಾಗದೇ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಸೌಕರ್ಯ ಪಡೆದುಕೊಳ್ಳಬೇಕೆಂದು ಮಂಜು ಮನವಿ ಮಾಡಿದರು.ಲಕ್ಕೂರು ಸರಕಾರಿ ಶಾಲೆಯಲ್ಲಿ ಮಕ್ಕಳ ಮನೆ ಆರಂಭಿಸಿದ ಹಿನ್ನೆಲೆ ಪ್ರಾಥಮಿಕ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಇಲ್ಲಿ ಕಲಿತ ಮಕ್ಕಳು ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳಿಗೆ ಹೋಗದಂತೆ ಗುಣಮಟ್ಟದ ಶಿಕ್ಷಣ ನೀಡಿ ಪೋಷಕರ ಮನಸ್ಸನ್ನು ಸೆಳೆಯಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಗ್ರಾಮದ ಮುಖಂಡರಾದ ಹಿರಣ್ಯ ಎಲ್ ಎಸ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅನಂತರಾಜು, ಗುತ್ತಿಗೆದಾರರಾದ ಗಣೇಶ್ ನಾಯಕ್‌, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವೀಣಾ ರೇವಣ್ಣ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಲ್ ಡಿ ಚಂದ್ರೇಗೌಡ, ಗ್ರಾಮದ ಮುಖಂಡರಾದ ತಿಮ್ಮಯ್ಯ, ಬಸವರಾಜ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜು, ಗ್ರಾಮದ ಮುಖಂಡರಾದ ಎಲ್ ಎಚ್ ಕಾಳೇಗೌಡ, ಗುತ್ತಿಗೆದಾರರಾದ ಸುರೇಶ, ಶಿವಣ್ಣಗೌಡರು, ಕೆ ಮಲ್ಲೇಶ್, ರಾಜೇಗೌಡರು, ಸುರೇಶ ನಾಯಕರು ಹಾಗೂ ಗ್ರಾಮದ ಹಿರಿಯರು ಯುವಕ ಮಿತ್ರರು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.