ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯ

| Published : Apr 10 2025, 01:01 AM IST

ಸಾರಾಂಶ

ಪ್ರತಿಯೊಂದು ಪುಟ್ಟ ಮಗುವಿನ ಮನಸ್ಸಿನಲ್ಲೂ ಅದರದ್ದೇ ಆದ ಕನಸುಗಳಿರುತ್ತವೆ. ಆ ಕನಸುಗಳು ನನಸಾಗಲು ಅಗತ್ಯ ಅವಕಾಶಗಳು ಸಿಗಬೇಕು.

ಕನ್ನಡಪ್ರಭ ವಾರ್ತೆ ಹುಣಸೂರು ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವೆಂದು ಒಸಾಟ್ ಸಂಸ್ಥೆಯ ಪ್ರತಿನಿಧಿ ಮತ್ತು ಸಾಮಾಜಿಕ ಸೇವಾಕರ್ತ ನರೇನ್ ಕುನ್ಯೋಡಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಒಸಾಟ್ ಸಂಸ್ಥೆಯಿಂದ ನೂತನವಾಗಿ ಒಂದು ಕೋಟಿ ರು. ವೆಚ್ಚದಡಿ ನಿರ್ಮಾಣಗೊಂಡ 6 ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪ್ರತಿಯೊಂದು ಪುಟ್ಟ ಮಗುವಿನ ಮನಸ್ಸಿನಲ್ಲೂ ಅದರದ್ದೇ ಆದ ಕನಸುಗಳಿರುತ್ತವೆ. ಆ ಕನಸುಗಳು ನನಸಾಗಲು ಅಗತ್ಯ ಅವಕಾಶಗಳು ಸಿಗಬೇಕು. ಅವಕಾಶಗಳು ಶಿಕ್ಷಣ ಹೊಂದಿದಾಗ ಮಾತ್ರ ಸಾಧ್ಯ. ಶಿಕ್ಷಣ ಶಾಲೆಯಲ್ಲಿ ಸಿಗುತ್ತದೆ. ಈ ರೀತಿಯ ಶಾಲೆಗಳೇ ಉತ್ತಮ ಕನಸುಗಳನ್ನು ಹೊತ್ತು ಬರುವ ಮನಸುಗಳಿಗೆ ವೇದಿಕೆಗಳಾಬೇಕು ಎಂದರು.ಒಸಾಟ್ ಸಂಸ್ಥೆಯ ನಿರ್ದೇಶಕ ಹರೀಶ್ ಮಾತನಾಡಿ, ದೇಶದಲ್ಲಿ ಈವರೆಗೆ ಒಸಾಟ್ ಸಂಸ್ಥೆಯಿಂದ ಒಟ್ಟು 105 ಶಾಲೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿದ್ದು, 11 ಕಾಮಗಾರಿಗಳು ಪ್ರಗತಿಯಲ್ಲಿದೆ. ಹುಣಸೂರು ತಾಲೂಕಿನಲ್ಲಿ 11 ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ದಾನಿಗಳ ನೆರವಿನೊಂದಿಗೆ ಒಸಾಟ್ ದಾನಿಗಳು ಮತ್ತು ಶಾಲೆಗೆ ಸೇತುವೆಯಾಗಿ ನಿಂತು ದುಡಿಯುತ್ತಿದೆ. ಇದೀಗ ನೂತನವಾಗಿ ನಿರ್ಮಾಣಗೊಂಡ ಶಾಲಾ ಕೊಠಡಿಗಳು ಮುಂದೆಯೂ ಇದೇ ರೀತಿಯ ನಿರ್ವಹಣೆ ಆಗುವ ಮೂಲಕ ಮುಂದಿನ ಪೀಳಿಗೆಗೆ ಬಳಕೆಯಾಗುವಂತಾಗಬೇಕು. ಆಗ ಮಾತ್ರ ಆರ್ಥಿಕ ಸಹಾಯ ನೀಡಿದ ದಾನಿಗಳ ಕುಟುಂಬಗಳಿಗೆ ಸಾರ್ಥಕತೆ ಸಿಗಲು ಸಾಧ್ಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ ಮಾತನಾಡಿ, ಶಾಲೆಯ ಮುಖ್ಯಶಿಕ್ಷಕ, ಶಿಕ್ಷಕರ ತಂಡ, ಶಾಲೆಯನ್ನು ದತ್ತು ಪಡೆದ ಕರ್ನಾಟಕ ರಕ್ಷಣಾ ವೇದಿಕೆ, ಎಸ್‌.ಡಿಎಂಸಿ ಮತ್ತು ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರದಿಂದ ಇಂದು ಈ ಶಾಲೆ ತಾಲೂಕಿನಲ್ಲೇ ಮಾದರಿ ಶಾಲೆಯಾಗಿ ಪರಿವರ್ತಿತಗೊಂಡಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯ ಶಿಕ್ಷಕರ ಕೊರತೆಯಾಗದಂತೆ ಅಥವಾ ಇನ್ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆಯನ್ನು ಎಸ್‌.ಡಿಎಂಸಿ ಅಧ್ಯಕ್ಷ ರಮೇಶ್ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತ, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಒಸಾಟ್ ಸಂಸ್ಥೆಯ ಮುಕ್ತ, ಎಚ್.ಜಿ. ಶಿವಸ್ವಾಮಿ, ತಾಪಂ ಇಒ ಕೆ. ಹೊಂಗಯ್ಯ, ನಗರಸಭೆ ಪೌರಾಯುಕ್ತೆ ಕೆ. ಮಾನಸ, ಮುಖ್ಯಶಿಕ್ಷಕ ಡಾ. ಮಾದುಪ್ರಸಾದ್, ವಿ.ಪಿ. ಸಾಯಿನಾಥ್, ಸಹಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಇದ್ದರು.