ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಯೋಜನೆಯನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.ನಗರ ಹೂಟಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿ ಕೇರ್ ಸಂಸ್ಥೆಯು ಆಯೋಜಿಸಿದ್ದ ಪರಿಸರ ಬೆಸುಗೆ-ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಮತ್ತು ಕಲಿಕಾ ಪ್ರದರ್ಶನದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ತಮ್ಮ ಮಕ್ಕಳನ್ನು ಹಣ ನೀಡಿ ಶಿಬಿರಗಳಿಗೆ ಸೇರಿಸಲಾಗುವುದಿಲ್ಲ. ಇದನ್ನರಿತು, ಕಿರಿಯ ತಲೆಮಾರಿಗೆ ಉತ್ಕೃಷ್ಟವಾದುದ್ದನ್ನು ನೀಡಲು ಸಮಾಜ ಮುಂದಾಗಬೇಕು ಎಂದರು.
ತಂದೆ-ತಾಯಿಗಳು ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಇರುತ್ತದೆ. ಮಕ್ಕಳು ಅವರ ನಂಬಿಕೆಗೆ ಘಾಸಿಗೊಳಿಸದೆ ಸಾಧನೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.ಹಿರಿಯ ರಂಗಭೂಮಿ ಕಲಾವಿದೆ ಡಾ. ರಾಮೇಶ್ವರಿ ವರ್ಮಾ ಮಾತನಾಡಿ, ಪರಿಸರ ಬೆಸುಗೆ ರೀತಿಯ ಉತ್ತಮ ಸಂದೇಶಗಳನ್ನು ರವಾನಿಸುವ ಶಿಬಿರಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ. ಶಿಬಿರಗಳು ಕಲಾವಿದರಿಗೂ ಆಸರೆಯಾಗುತ್ತಿವೆ. ಆದರೆ, ಅತಿಯಾದ ಹೊರೆ ಪೋಷಕರ ಮೇಲೆ ಬೀಳಬಾರದು. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಲಿ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಮಾತನಾಡಿ, ಸಾಮಾಜಿಕ ಜಾಲತಾಣ ಬಳಕೆ ವಿಚಾರದಲ್ಲಿ ಮತ್ತು ಅಪರಿಚಿತರ ಸ್ನೇಹ ಮಾಡುವಾಗ ಎಚ್ಚರ ವಹಿಸಬೇಕು. ಪ್ರಸ್ತುತ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ. ಮದುವೆಗೂ ಮುನ್ನ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಅಲಂಕರಿಸಿದರೆ ಯಾರ ಮೇಲು ಅವಲಂಬಿತರಾಗದೇ ಸ್ವಾಲಂಬಿಗಳಾಗಿ ಬದುಕಬಹುದು ಎಂದು ತಿಳಿಸಿದರು.ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆ ಎಂಬ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವವರು ನಮ್ಮ ನಡುವೆ ಇದ್ದಾರೆ. ಹೀಗಾಗಿ, ಮಾಧ್ಯಮ ಹಾಗೂ ಶಾಲೆ ಯಾವುದೇ ಇರಲಿ ಶಿಕ್ಷಿತರಾಗುವುದು ಮುಖ್ಯ ಎಂದರು.
ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಆದಿವಾಸಿ ಹೆಣ್ಣು ಮಕ್ಕಳನ್ನು ಗೌರವಿಸಲಾಯಿತು.ಸಂಸ್ಥೆಯ ಸಂಸ್ಥಾಪಕಿ ಡಾ. ಕುಮುದಿನಿ ಅಚ್ಚಿ, ಅಯ್ಯಪ್ಪ ಹೂಗಾರ್, ನಿಮಿಲಿತ, ರವಿ ಬಳೆ, ಬಿಇಒ ಎಂ. ಪ್ರಕಾಶ್, ಜೆಎಸ್‌ಎಸ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಎಂ. ಕಿಶೋರ್, ಶಾಲೆಯ ಮುಖ್ಯೋಪಾಧ್ಯಾಯ ಸತೀಶ್, ಪ್ರಸನ್ನ, ಸಿಂಚನಾ, ಸತೀಶ್ ಜವರೇಗೌಡ, ಡಾ. ರತಿರಾವ್, ಪ್ರೊ. ಲತಾ ಕೆ. ಬಿದ್ದಪ್ಪ, ಪ್ರೊ.ಪಿ.ಎನ್. ಶ್ರೀದೇವಿ, ರೂಪ ರಾವ್, ಡಾ. ಶ್ರೀಕಾಂತ್, ಪೃಥ್ವಿ, ಡಾ. ಸಾರಿಕಾ ಪ್ರಸಾದ್ ಮೊದಲಾದವರು ಇದ್ದರು.