ಸರ್ಕಾರಿ ಆಸ್ಪತ್ರೆ ವಂಚಿತ ಹೇರೂರು

| Published : Aug 08 2024, 01:38 AM IST

ಸಾರಾಂಶ

ಸ್ವಾತಂತ್ರ್ಯ ಬಂದು 77 ವರ್ಷ ಗತಿಸುತ್ತಿದ್ದರೂ ಸಹ ತಾಲೂಕಿನ ಹೇರೂರು ಗ್ರಾಮ ಇದಕ್ಕೆ ಇನ್ನೂ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ.

ಕಾಯಿಲೆ ಬಂದರೆ ಪರದಾಡುವ ಗ್ರಾಮಸ್ಥರು । ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆ

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಸ್ವಾತಂತ್ರ್ಯ ಬಂದು 77 ವರ್ಷ ಗತಿಸುತ್ತಿದ್ದರೂ ಸಹ ತಾಲೂಕಿನ ಹೇರೂರು ಗ್ರಾಮ ಇದಕ್ಕೆ ಇನ್ನೂ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ.

ತಾಲೂಕು ಕೇಂದ್ರಕ್ಕೆ 10 ಕಿಮೀ ದೂರದಲ್ಲಿ ಹೇರೂರು ಗ್ರಾಮ ಇದ್ದು, ಇಲ್ಲಿ ಆರೋಗ್ಯ ಕೇಂದ್ರವೇ ಇಲ್ಲ. ಗ್ರಾಮಸ್ಥರಿಗೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕಾಯಿಲೆ ಸೇರಿದಂತೆ ಅವಘಡ ಸಂಭವಿಸಿದರೂ ತಕ್ಷಣ ಚಿಕಿತ್ಸೆ ಸಿಗುವುದಿಲ್ಲ.

ಹೇರೂರು ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರ. ಈ ಗ್ರಾಮ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇದು ಜಿಲ್ಲಾ ಪಂಚಾಯಿತಿ ಕ್ಷೇತ್ರ, ತಾಲೂಕು ಪಂಚಾಯಿತಿ ಕ್ಷೇತ್ರವಲ್ಲದೆ ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಗೋನಾಳ, ಬಾಪರಡ್ಡಿ ಕ್ಯಾಂಪ್, ಡಾಕ್ಟರ್ ಕ್ಯಾಂಪ್, ಕೇಸರಹಟ್ಟಿ, ಮಲಕನಮುರಡಿ, ಆರಾಳ, ಕೇಸಕ್ಕಿ ಹಂಚಿನಾಳ ಸೇರಿದಂತೆ ಸಣ್ಣ ಪುಟ್ಟ ಕ್ಯಾಂಪ್‌ಗಳು ಈ ಗ್ರಾಪಂ ವ್ಯಾಪ್ತಿಗೆ ಬರುತ್ತವೆ.

ಈ ಭಾಗದಲ್ಲಿ ಭತ್ತದ ಬೆಳೆ ಅವಲಂಬಿತರಾಗಿರುವ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾಗಿ ಅವಘಡಗಳು ಸಂಭವಿಸಿವೆ. ಇಂತಹ ಸಂದರ್ಭದಲ್ಲಿ ತ್ವರಿತಗತಿಯ ಚಿಕಿತ್ಸೆಗಾಗಿ ಹೊಸಕೇರಾ ಆರೋಗ್ಯ ಕೇಂದ್ರ ಅಥವಾ ಗಂಗಾವತಿ ನಗರಕ್ಕೆ ಓಡಾಡುವ ಪರಿಸ್ಥಿತಿ ಇದೆ. ಸಮೀಪದಲ್ಲಿ ಯಾವುದೇ ಆಸ್ಪತ್ರೆ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಎನ್ನುವುದು ಗಗನ ಕುಸುಮವಾಗಿದೆ.

ತಾತ್ಕಾಲಿಕ ಕಟ್ಟಡ:

ಹೇರೂರು ಗ್ರಾಮದಲ್ಲಿ ಆರೋಗ್ಯ ಕೇಂದ್ರ ನಡೆಸಲು ತಾತ್ಕಾಲಿಕವಾಗಿ ಖಾಲಿ ಇರುವ ಶಾಲಾ ಹಳೆಯ ಕಟ್ಟಡ ನೀಡುವುದಕ್ಕಾಗಿ ಮುಂದಾಗಿದ್ದರೂ ಸಹ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹಲವಾರು ಬಾರಿ ಆರೋಗ್ಯ ಸಚಿವರಿಗೆ, ಕನಕಗಿರಿ ಕ್ಷೇತ್ರದ ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸಹ ಗಮನಹರಿಸುತ್ತಿಲ್ಲ ಎನ್ನಲಾಗಿದೆ.

ಇನ್ನಾದರೂ ಈ ಕ್ಷೇತ್ರದ ಶಾಸಕರಾಗಿರುವ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಆಸ್ಪತ್ರೆ ಸ್ಥಾಪನೆಗೆ ಮುಂದಾದರೆ ಕಾಯಿಲೆಯಿಂದ ತತ್ತರಿಸುವ ಜನರಿಗೆ ಚಿಕಿತ್ಸೆ ಕಲ್ಪಿಸಿದಂತಾಗುತ್ತದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಹೇರೂರು ಗ್ರಾಮದಲ್ಲಿ ಆರೋಗ್ಯ ಕೇಂದ್ರವೇ ಇಲ್ಲ. ಸಚಿವ ಶಿವರಾಜ ತಂಗಡಗಿ ಅವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸ್ಪಂದನೆ ಮಾಡಿಲ್ಲ. ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು.

ಹೇರೂರು ಗ್ರಾಮವು ಹೊಸಕೇರಾ ಆರೋಗ್ಯ ಉಪವಿಭಾಗಕ್ಕೆ ಒಳಪಡುತ್ತಿದೆ. ಈ ಭಾಗದ ಜನರು ಚಿಕಿತ್ಸೆಗಾಗಿ ಹೋಸಕೇರಾ ಅಥವಾ ಗಂಗಾವತಿ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ ತಿಳಿಸಿದ್ದಾರೆ.