ಸಹಕಾರಿ ಸಂಘಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಹೇಳಿದರು.

ಶಿಗ್ಗಾಂವಿ: ಮಹಾರಾಷ್ಟ್ರದಲ್ಲಿ ಸಹಕಾರಿ ಸಂಘಗಳು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಣಯಿಸುವ ಶಕ್ತಿ ಹೊಂದಿವೆ. ಆದರೆ ದುರ್ದೈವದ ಸಂಗತಿಯೆಂದರೆ ಕರ್ನಾಟಕದಲ್ಲಿ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಾರಾಗಬೇಕು ಎಂಬುದನ್ನು ಸರಕಾರಗಳೇ ನಿರ್ಧರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಇಂತಹ ಸರಕಾರಿ ಹಸ್ತಕ್ಷೇಪ ನಿಲ್ಲಬೇಕು. ಸಹಕಾರಿ ಸಂಘಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕೆಸಿಸಿ ಬ್ಯಾಂಕ್ ಎದುರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಶಿಗ್ಗಾಂವಿ, ಕೆಸಿಸಿ ಬ್ಯಾಂಕ್ ಧಾರವಾಡ, ಕೆಎಂಎಫ್ ಹಾವೇರಿ ಹಾಗೂ ಶಿಗ್ಗಾಂವಿ ತಾಲೂಕಿನ ವಿವಿಧ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ರೈತರು ಕೃಷಿಯನ್ನು ಕೇವಲ ಜೀವನೋಪಾಯದ ಚಟುವಟಿಕೆಯಾಗಿ ನೋಡದೆ ಉದ್ಯಮವನ್ನಾಗಿ ಪರಿವರ್ತಿಸಿಕೊಳ್ಳುವ ಅಗತ್ಯವಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಸಾವಯವ ಪದ್ಧತಿ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು. ರೈತರಿಗೆ ಅಗತ್ಯವಿರುವ ಸಾಲ ಸೌಲಭ್ಯಗಳು ಸರಳವಾಗಿ ಮತ್ತು ಮುಕ್ತವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ರೈತರ ಆರ್ಥಿಕ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲದ ಬಡ್ಡಿದರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಹಕಾರಿ ಕೃಷಿ ಪತ್ತಿನ ಸಂಘಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ರೈತರು ಈ ಸೌಲಭ್ಯಗಳ ಬಗ್ಗೆ ಅರಿವು ಹೊಂದಿ ಸಹಕಾರಿ ಸಂಘಗಳ ಮೂಲಕ ದೊರೆಯುವ ಸಾಲ ಹಾಗೂ ಇತರ ಆರ್ಥಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ನಂಬಿಕೆ, ಪಾರದರ್ಶಕತೆ ಮತ್ತು ಸಹಕಾರ ಮನೋಭಾವನೆ ಬೆಳೆದಾಗ ಮಾತ್ರ ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಲಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಶಿಗ್ಗಾಂವಿ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಧರೆಪ್ಪಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶಿವಾನಂದ ರಾಮಗೇರಿ ಧ್ವಜಾರೋಹಣ ನೆರವೇರಿಸಿದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಾಮನಿರ್ದೇಶಿತ ಸದಸ್ಯ ಶಂಕರಗೌಡ ಪಾಟೀಲ, ಗುಡ್ಡಪ್ಪ ಜಾಲದಿ, ಎಸ್.ಜಿ. ಸುಣಗಾರ, ಎಸ್. ಸಂಗಣ್ಣನವರ, ಡಾ.ಪಿ.ಆರ್. ಪಾಟೀಲ, ಡಾ.ಆರ್.ಎಸ್. ಅರಳಲೇಮಠ, ರೇಣುಕಾ ಸಾತಣ್ಣನವರ, ಶಿವಾನಂದ ಕಮಡೊಳ್ಳಿ, ಗಣಪತಿ ಗುಣೋಜಿ, ಮಾನಸಾ ಬಿ., ಎನ್. ಪೂಜಾರ, ರೇಣುಕಾ ನೀಲಗಾರ, ಸತೀಶ ಕೊಟೆಣ್ಣವರ, ಶಿವರಾಜ ರಾಯಣ್ಣವರ, ರವಿ ಕಳ್ಳಿಮನಿ, ಅಶೋಕ ಬೆಂಗೇರಿ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕ್ರೆಡಿಟ್ ಸೊಸೈಟಿಗಳು ಹಾಗೂ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.