ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಖಂಡಿಸಿ ಶನಿವಾರ ಎಐಡಿಎಸ್‌ಒ ನೇತೃತ್ವದ ಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು. ನಗರದ ಡಿಸಿ ಸರ್ಕಲ್‌ನಲ್ಲಿ ಸೇರಿದ ವಿದ್ಯಾರ್ಥಿಗಳು ಎನ್‌ಟಿಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಮಾತನಾಡಿ, ಮೇ 3 ರಂದು ನಡೆದ ನೀಟ್ ಪ್ರಶ್ನೆಪತ್ರಿಕೆಯು ಮುಂಚಿತವಾಗಿಯೇ ಟೆಲಿಗ್ರಾಮ್ ನಲ್ಲಿ ಹರಿದಾಡಿತ್ತು. ಇಷ್ಟಾಗಿಯೂ ಎನ್ ಟಿ ಎ ಪರೀಕ್ಷೆ ನಡೆಸಿತು. ಇದಾದ ಕೆಲವೇ ದಿನಕ್ಕೆ ಪರೀಕ್ಷೆ ರದ್ದುಗೊಳಿಸಲಾಯಿತು. ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ ನೀರಿನಲ್ಲಿ ಹೋಮವಾಯಿತು. ಕೇಂದ್ರ ಸರ್ಕಾರ ಮತ್ತು ಎನ್ ಟಿ ಎ ಬೇಜವಾಬ್ದಾರಿತನದಿಂದ ಆಘಾತಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ.
ಕಳೆದ 3 ದಿನದಲ್ಲಿ 7 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಇಲ್ಲಿಯವರೆಗೂ ದೇಶದವ್ಯಾಪಿ 16 ವಿದ್ಯಾರ್ಥಿಗಳು ಜೀವ ತೊರೆದಿದ್ದಾರೆ. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ರೈತರ ಆತ್ಮಹತ್ಯೆಗಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿವೆ. ಇವು ಆತ್ಮಹತ್ಯೆಯಲ್ಲ ಸರ್ಕಾರ ಮತ್ತು ವ್ಯವಸ್ಥೆ ನಡೆಸಿದ ನರಮೇಧ ಎಂದು ಖಂಡಿಸಿದರು.ಇಂದು ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ನಾಶವಾಗಿದೆ. ನೀಟ್ ಆರಂಭಿಸಿರುವುದೇ ಕೋಚಿಂಗ್ ಮಾಫಿಯಾಗಳ ವ್ಯಾಪಾರಕ್ಕೆ. ಅಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನ ಸ್ಪರ್ಧೆ ಸಾಧ್ಯವಿಲ್ಲ. ಕೋಚಿಂಗ್ ಇಲ್ಲದೇ ನೀಟ್ ನಲ್ಲಿ ಸ್ಪರ್ಧಿಸಲಾಗದು. ಕೋಚಿಂಗಿಗಾಗಿ ಲಕ್ಷಾಂತರ ರೂ ಖರ್ಚು ಮಾಡಬೇಕು. ವಾರ್ಷಿಕ 1.4 ಲಕ್ಷ ಕೋಟಿಯಿರುವ ದೇಶದ ಶಿಕ್ಷಣ ಬಜೆಟ್ ಗೆ ಸಮಾನವಾಗಿ ದೇಶದ ಪಾಲಕರು ನೀಟ್ ಕೋಚಿಂಗಿಗೆ ಸುರಿಯಬೇಕಿದೆ. ಈ ವೆಚ್ಚ ಬರಿಸಲಾಗದ ಬಡಮಕ್ಕಳ ವೈದ್ಯಕೀಯದ ಕನಸನ್ನು ವ್ಯವಸ್ಥೆ ಕೊಂದಿದೆ.
ವೈದ್ಯಕೀಯ ಶಿಕ್ಷಣವೇ ಇಷ್ಟು ದುಬಾರಿಯಾದಾಗ ವೈದ್ಯಕೀಯವು ಸೇವೆಯಾಗಿ ಉಳಿಯಲು ಸಾಧ್ಯವಿಲ್ಲ. ಕೇವಲ ಹಣವಂತರಿಗಷ್ಟೇ ಮೀಸಲಿಟ್ಟು ಅತ್ಯಂತ ವ್ಯವಸ್ಥಿತವಾಗಿ ಬಡವರಿಂದ ವೈದ್ಯಕೀಯ ಶಿಕ್ಷಣ ಮತ್ತು ಸೇವೆಯನ್ನು ಕಸಿಯಲಾಗಿದೆ. ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕಾಗಿಸಲಾಗಿದೆ. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟೀಕರಣದ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ಸಮರ ನಡೆಸಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಈರಣ್ಣ ಸೇರಿದಂತೆ ಎಐಡಿಎಸ್ಓ ಸದಸ್ಯರು , ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.