ತಿಪಟೂರು: ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದರ ಮಹಾಸಭಾ ತಿಪಟೂರು ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು
ತಿಪಟೂರು: ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದರ ಮಹಾಸಭಾ ತಿಪಟೂರು ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹಾಗೂ ಒಳಮೀಸಲಾತಿ ವಿರೋಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾದರ ಮಹಾಸಭಾ ಅಧ್ಯಕ್ಷ ಕೆ.ಎಂ. ಶಾಂತಪ್ಪ, ಸರ್ಕಾರವು ಒಳಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದೆ ಕೋರ್ಟ್ ಪ್ರಕರಣಗಳನ್ನು ನೆಪವಿಟ್ಟು ನಾಟಕವಾಡುತ್ತಿದೆ ಎಂದು ಆರೋಪಿಸಿದರು. ಪಟ್ಟಭದ್ರ ಹಿತಾಸಕ್ತಿಯುಳ್ಳ ಕೆಲವು ಸಚಿವರ ಕುತಂತ್ರದಿಂದ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರವು ಮಾದಿಗರ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಈಗ ಮಾದಿಗರಿಗೆ ದ್ರೋಹ ಮಾಡುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ. ಒಳಮೀಸಲಾತಿ ಸಂವಿಧಾನಬದ್ಧವಾದ ನಮ್ಮ ಹಕ್ಕು. ಈ ಹಕ್ಕಿಗಾಗಿ ಮಾದಿಗ ಬಂಧುಗಳು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಮಾದಿಗರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಸಮಯ ದೂರದಲ್ಲಿಲ್ಲ ಎಂದು ಎಚ್ಚರಿಸಿದರು.ಮಾದಿಗ ದಂಡೋರಾ ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ, ಆದಿಜಾಂಬವ ಮಹಾಸಭಾ ಅಧ್ಯಕ್ಷ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿದರು. ಪ್ರತಿಭಟನೆಯಲ್ಲಿ ಮತ್ತಿಹಳ್ಳಿ ಹರೀಶ್ ಗೌಡ, ಕೊಪ್ಪ ಜಗದಾರ್ಯಸ್ವಾಮಿ, ಹತ್ಯಾಳ್ ಮೂರ್ತಿ, ಡಾ. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ವಿಭಾಗೀಯ ಅಧ್ಯಕ್ಷ ಯಗಚೀಕಟ್ಟೆ ರಾಘವೇಂದ್ರ, ಮುಖಂಡರಾದ ಮಾರನಗೆರೆ ರಮೇಶ್, ಗಾಂಧಿನಗರ ಬಸವರಾಜು, ಟಿ.ಕೆ. ಕುಮಾರ್, ಬಿಳಿಗೆರೆ ಚಂದ್ರಶೇಖರ್, ಮಹದೇವಯ್ಯ, ರಾಜು ಬೆಣ್ಣೆನಹಳ್ಳಿ, ರವೀಶ್, ಜಕ್ಕನಹಳ್ಳಿ ಮೋಹನ್, ಈಚನೂರು ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಕೊಪ್ಪ. ಮೈನ್ಸ್ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.