ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿದೆ: ಎಚ್.ಡಿ ತಮ್ಮಯ್ಯ

| Published : Feb 17 2025, 12:32 AM IST

ಸಾರಾಂಶ

ಚಿಕ್ಕಮಗಳೂರು, ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೂ ಆಧ್ಯತೆ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿಲ್ಲ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

- ತಾಲೂಕಿನ ಬಿಳೇಕಲ್ಲಹಳ್ಳಿ ಹಾಗೂ ಲಕ್ಕಮ್ಮನಹಳ್ಳಿ ರಸ್ತೆ, ದೇವಸ್ಥಾನ, ಸಮುದಾಯ ಭವನ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೂ ಆಧ್ಯತೆ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿಲ್ಲ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.ತಾಲೂಕಿನ ಬಿಳೇಕಲ್ಲಹಳ್ಳಿ ಹಾಗೂ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರ ಕ್ಷೇತ್ರದ ಅಭಿವೃದ್ಧಿ ದೃಷ್ಠಿ ಯಿಂದ ₹೨೫ ಕೋಟಿ ವಿಶೇಷ ಅನುದಾನ ನೀಡಿದೆ. ಈ ಅನುದಾನದೊಂದಿಗೆ ವಿವಿಧ ಕಾಮಗಾರಿಗಳನ್ನು ಕೈಗೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ನನ್ನ ಜವಾಬ್ದಾರಿ ಎಂದರು.

ಲಕ್ಯ ಹೋಬಳಿ ಲಕ್ಕಮ್ಮನಹಳ್ಳಿ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ₹೫೦ ಲಕ್ಷ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಬಾಳೇನಹಳ್ಳಿ ಬೀರಲಿಂಗೇಶ್ವರ ದೇವಾಲಯಕ್ಕೆ ₹೧೦ ಲಕ್ಷ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ೧೦ ಲಕ್ಷ, ಸಿರಬಡಿಗೆ ಗ್ರಾಮದಲ್ಲಿ ₹೨೦ ಲಕ್ಷ ರು. ಗಳ ಕಾಂಕ್ರಿಟ್ ರಸ್ತೆ, ಸೇರಿದಂತೆ ಕುನ್ನಾಳು ರಸ್ತೆ, ದೇವಾಲಯ, ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ₹೧.೧೦ ಕೋಟಿ ಅನುದಾನವನ್ನು ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ದೆಬೋರನಹಳ್ಳಿ ದೇವಾಲಯಕ್ಕೆ ೫ ಲಕ್ಷ, ಉದ್ದೆಬೋರನಹಳ್ಳಿ ಗ್ರಾಮದ ಕಾಂಕ್ರೀಟ್ ರಸ್ತೆಗೆ ₹೨೦ ಲಕ್ಷ ಹಾಗೂ ಗ್ರಾಮದ ಸಾರ್ವಜನಿಕ ಸಮುದಾಯ ಭವನಕ್ಕೆ ₹೧೦ ಲಕ್ಷ ಸೇರಿದಂತೆ ಒಟ್ಟು ₹೧.೧೫ ಕೋಟಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದರು.

ಸದ್ಯ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದಿಂದ ಅತಿ ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ರೈತರ ಮನವಿ ಮೇರೆಗೆ ಹಾಗೂ ರೈತರ ಹಿತದೃಷ್ಠಿಯಿಂದ ಬಾಳೇನಹಳ್ಳಿಯಿಂದ ಕಟ್ಟೆ ಹೊಳೆಗೆ ನೀರು ತುಂಬಿಸುವ ಯೋಜನೆಗೆ ₹೧ ೫೦ಕೋಟಿ ಅಂದಾಜು ಪಟ್ಟಿ ಸಲ್ಲಿಸಿ ಅನುಮೋದನೆ ದೊರಕಿದೆ ಸದ್ಯದಲ್ಲೆ ಟೆಂಡರ್ ಕರೆದು ಕಾಮಗಾರಿಗೆ ಚಾನಲೆ ನೀಡಲಾಗುವುದು ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಹಿನ್ನಡೆಯಾಗದೆ ಪ್ರತಿಯೊಂದು ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸಲಾಗುವುದು ಎಂದರು.

ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭರತ್ ಮಾತನಾಡಿ, ಕ್ಷೇತ್ರದ ರೈತಬಾಂದವರ ಸಮಸ್ಯೆಗಳನ್ನು ಅತಿ ಮುತುವರ್ಜಿಯಿಂದ ಪರಿಹರಿಸುವುದಲ್ಲದೇ ಎಲ್ಲಾ ವರ್ಗದ ಜನರ ಕುಂದು ಕೊರತೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಶಾಸಕರು ಜನಪ್ರಿಯರಾಗಿದ್ದಾರೆ ಎಂದು ಹೇಳಿದರು.

ಲಕ್ಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಮಾತನಾಡಿ ಈವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಲಾಗಿದೆ. ಎಲ್ಲಾ ಕಾಮಗಾರಿಗಳನ್ನು ಸ್ಥಳದಲ್ಲಿ ಪರಿಶೀಲಿಸಿ ಮುಂದುವರಿಸಲು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾನು ಪ್ರಕಾಶ್, ಲಕ್ಕಮ್ಮನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಲಕ್ಷಣ್ ಗೌಡ,ಪುಟ್ಟೇಗೌಡ, ಚಂದ್ರಶೇಕರ್, ಸಣ್ಣ ಕಾಟೆಗೌಡ, ಹರೀಶ್, ಯಶೋಧ, ಲತಾ, ರತ್ನಮ್ಮ, ಜಗದೀಶ್, ನಾಗರತ್ನ, ಗೋಪಿಕೃಷ್ಣ, ಲೋಲಾಕ್ಷಿ, ದೌರ್ಜನ್ಯ ಸಮಿತಿ ಸದಸ್ಯ ರಮೇಶ್ ಯು.ಸಿ., ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.