ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಂದು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಗ್ರಾಮಗಳ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವುದು ಗ್ರಾಮ ಪಂಚಾಯ್ತಿ ನೌಕರರು. ಆದರೆ, ಗ್ರಾಪಂ ನೌಕರರಿಗೆ ವೇತನ ಹೆಚ್ಚಳ ಮಾಡಲು ಸರ್ಕಾರಕ್ಕೆ ಇಚ್ಚಾಸಕ್ತಿ ಇಲ್ಲ. ಅಲ್ಲದೆ, ನೌಕರರ ಕೆಲಸವನ್ನು ಕಡಿತ ಮಾಡಲು ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡ ದೂರಿದರು.ನಗರದ ಗನ್ ಹೌಸ್ ವೃತ್ತದ ಬಳಿಯ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯು ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಗ್ರಾಪಂ ಖಾಸಗೀಕರಣಕ್ಕೆ ಮುಂದಾಗಿದೆ. ಅದರ ಭಾಗವಾಗಿ ಕಡಿಮೆ ವೇತನ ನೀಡಿ ಜಲಸಖಿಯರನ್ನು ನೇಮಿಸಿಕೊಂಡು ವಾಟರ್ ಮ್ಯಾನ್ ಗಳನ್ನು ತೆಗೆಯುವ ಕೆಲಸ ಆರಂಭವಾಗುತ್ತಿದೆ. ಹಾಗೆಯೇ ಕರವಸೂಲಿಗಾರರು, ಕಂಪ್ಯೂಟರ್ ಆಪರೇಟರ್ ಗಳನ್ನು ಕೆಲಸದಿಂದ ತೆಗೆದು, ತಮಿಳುನಾಡು ಮಾದರಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸರ್ಕಾರ ತೆರೆಮರೆಯಲ್ಲಿ ಕೆಲಸ ಮಾಡುವ ಮೂಲಕ ಗ್ರಾಪಂ ನೌಕರರನ್ನು ಬೀದಿಗೆ ತಳ್ಳಲು ಹೊರಟಿದೆ ಎಂದು ಆರೋಪಿಸಿದರು.ಇದೇ ಸರ್ಕಾರ ಜೈಲಿನ ಕೈದಿಗಳಿಗೆ ತಿಂಗಳಿಗೆ 18000 ಕೂಲಿ ನಿಗದಿ ಮಾಡಿದೆ. ಆದರೆ, ಗ್ರಾಪಂ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಏರಿಸುತ್ತಿಲ್ಲ. ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಈ ಸರ್ಕಾರಗಳ ಜನ ವಿರೋಧಿ, ನೌಕರರ ವಿರೋಧಿ ನೀತಿಗಳ ವಿರುದ್ಧ ಗ್ರಾಪಂ ನೌಕರರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಸಂಘದ ರಾಜ್ಯ ಕಾರ್ಯದರ್ಶಿ ಜಿ. ರಾಮಕೃಷ್ಣ, ಜಿಲ್ಲಾಧ್ಯಕ್ಷ ಕೆ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್. ದಿನೇಶ್, ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಂ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಕಿರಿಜಾಜಿ ಲೋಕೇಶ್, ರೇಖಾ ಇದ್ದರು.ಸಮಾವೇಶದ ನಿರ್ಣಯಸೆ.12, 13 ಮತ್ತು 14 ರಂದು ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಎಲ್ಲಾ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಕೋಮುವಾದ, ಜಾತಿವಾದದ ವಿರುದ್ಧ ಹೋರಾಡುವುದು, ಕನಿಷ್ಠ ಕೂಲಿ 31 ಸಾವಿರ ನೀಡಬೇಕು. ನಿವೃತ್ತ ನೌಕರರಿಗೆ 11 ಸಾವಿರ ಪಿಂಚಣಿ ನೀಡಬೇಕು. ಸ್ವಚ್ಛ ವಾಹಿನಿಯವರಿಗೆ ಸರ್ಕಾರವೇ ನೇರವಾಗಿ ವೇತನ ನೀಡಬೇಕು ಎಂಬ ಬೇಡಿಕೆಯೊಂದಿಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.