ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಯಾವುದೇ ಇಲಾಖೆಗಳಲ್ಲಿ ಶೇ. ೬೦ರಷ್ಟು ಅಧಿಕಾರಿಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ಹೇಗೆ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತೆ. ಇದರ ಸಂಬಂಧ ವಿಧಾನಸಭೆಯಲ್ಲಿ ಹತ್ತಾರು ಸಲ ಪ್ರಶ್ನೆ ಮಾಡಿದ್ದರೂ ಯಾವುದೇ ಅಧಿಕಾರಿ ನೇಮಕವಾಗಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು. ರೈತರಿಂದ ಕಪ್ಪು ರಾಗಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಯಾವುದೇ ಇಲಾಖೆಗಳಲ್ಲಿ ಶೇ. ೬೦ರಷ್ಟು ಅಧಿಕಾರಿಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ಹೇಗೆ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತೆ. ಇದರ ಸಂಬಂಧ ವಿಧಾನಸಭೆಯಲ್ಲಿ ಹತ್ತಾರು ಸಲ ಪ್ರಶ್ನೆ ಮಾಡಿದ್ದರೂ ಯಾವುದೇ ಅಧಿಕಾರಿ ನೇಮಕವಾಗಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಮಂಗಳವಾರ ಆಯೋಜನೆ ಮಾಡಿದ್ದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರ ಪರವಾಗಿ ವಿಶೇಷ ಕಾಳಜಿ ತೋರಿದ ಜತೆಗೆ ಹಲವಾರು ಕಾರ್ಯಗಳನ್ನು ಕಾರ್ಯರೂಪಕ್ಕೆ ತಂದು ಚೌಧರಿ ಚರಣ್‌ಸಿಂಗ್ ಅವರ ಜನ್ಮದಿನ ಪ್ರಯುಕ್ತ ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಹಿಂದೆ ಆಲೂಗೆಡ್ಡೆ ಹಾಗೂ ರಾಗಿಬೆಳೆಯನ್ನು ಹೆಚ್ಚಿಗೆ ಬೆಳೆಯಲಾಗುತ್ತಿತ್ತು, ಆದರೆ ಈಗ ಸಮಸ್ಯೆಗಳಿಂದಾಗಿ ರೈತರು ಆಲುಗೆಡ್ಡೆ ಬೆಳೆಯದೇ, ಜೋಳ ಬೆಳೆಯುತ್ತಿದ್ದಾರೆ. ರೈತರ ಬೆಳೆದ ಬೆಳೆಗಳಿಗೆ ಅಗತ್ಯ ಸಮಯದಲ್ಲಿ ಬೆಂಬಲ ಬೆಲೆ ನೀಡೊಲ್ಲ, ರೈತರು ವರ್ತಕರಿಗೆ ಮಾರಾಟ ಮಾಡಿದ ನಂತರ ಬೆಂಬಲ ಬೆಲೆ ಘೋಷಿಸಿ, ಬೆಳೆ ಖರೀದಿ ಮಾಡುತ್ತಾರೆ. ಮಧ್ಯವರ್ತಿಗಳು ಹಾಗೂ ವರ್ತಕರು ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ ಆದರೆ ರೈತರಿಗೆ ಅನ್ಯಾಯವಾಗುತ್ತಿದೆ, ಯಾರು ಕೇಳ್ತಾರೀ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಹಿಂದೆ ನಾನು ಕೆಎಂಎಫ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ರೈತರಿಂದ ಜೋಳವನ್ನು ನೇರವಾಗಿ ಖರೀದಿ ಮಾಡುತ್ತಿದ್ದೆ, ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೆ ಇದರೆ ಬಗ್ಗೆ ನೀವು ಪರಿಶೀಲನೆ ನಡೆಸಬಹುದು, ಆದರೆ ಈಗ ಏನಾಗಿದೆ ನೋಡಿ ಎಂದು ಕೆಎಂಎಫ್ ಆಡಳಿತ ವ್ಯವಸ್ಥೆಯನ್ನು ದೂರಿದರು. ರೈತರೊಬ್ಬರು ನಮ್ಮಿಂದ ಕಪ್ಪು ರಾಗಿ ಖರೀದಿ ಮಾಡೊಲ್ಲ, ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಪ್ಪುರಾಗಿ ಕೊಡುತ್ತಾರೆ, ಎಲ್ಲಿಂದ ಬರುತ್ತೆ ಎಂದು ಶಾಸಕರನ್ನು ಪ್ರಶ್ನಿಸಿದರು. ರೈತರಿಂದ ಕಪ್ಪು ರಾಗಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್‌ಗೆ ಸೂಚಿಸಿದರು.ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ್ ರಾವ್ ತೋಟಗಾರಿಕೆ ಬೆಳೆಗಳಾದ ತೆಂಗು, ಬಾಳೆ, ಅಡಿಕೆ, ತಾಳೆ ಬೆಳೆ ಬೆಳೆಯ ಜತೆಗೆ ನೀರಿನ ಸದ್ಬಳಕೆ ಕುರಿತು ಹನಿ ನೀರಾವರಿ ಸೌಲಭ್ಯ ಮತ್ತು ತೆಂಗು ಅಡಿಕೆ ಬೆಳೆಯಲ್ಲಿ ರೋಗಗಳು, ಕೀಟಬಾಧೆ ತೆಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ಹಾಗೂ ಬಾಳೆ ಬೆಳೆ ಹಾಗೂ ಸಹಾಯ ಧನಗಳ ಬಗ್ಗೆ ಕುರಿತು ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಅವರು ಮೀನು ಸಾಗಣಿಕೆ ಹಾಗೂ ಇತರೆ ವಿಷಯ ಕುರಿತು ಮಾಹಿತಿ ನೀಡಿದರು.ಮಹೇಶ್ ಕುಮಾರ್ ಅವರು ರೇಷ್ಮೆ ಹುಳು ಸಾಗಣಿಕೆ ಹಾಗೂ ಹಿಪ್ಪುನೇರಳೆ ಬೆಳೆ ಕುರಿತು ಮಾಹಿತಿ ನೀಡಿದರು. ಪಡುವಲಹಿಪ್ಪೆಯ ಗುರುರಾಜ್ ಪಿ.ಎಂ., ಕೋಡಿಹಳ್ಳಿಯ ಕುಮಾರ್ ಕೆ.ಡಿ., ಬನಕುಪ್ಪೆಯ ರೇವಣ್ಣ, ಉದ್ದೂರುಹೊಸಳ್ಳಿಯ ಅಣ್ಣಾಜಪ್ಪ, ಶಂಕರಶೆಟ್ಟಿಹಳ್ಳಿಯ ಪುಟ್ಟತಾಯಿ ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿಟ್ಟನಹಳ್ಳಿಯ ಶ್ರೀ ಅನ್ನಪೂರ್ಣೇಶ್ವರಿ ಆಹಾರ ಭದ್ರತ ಗುಂಪಿಗೆ ೨೫ ಸಾವಿರ ಪ್ರೋತ್ಸಾಹ ಧನ ನೀಡಲಾಯಿತು ಹಾಗೂ ಜಿಲ್ಲೆಯ ಶ್ರೇಷ್ಠಕೃಷಿಕ ಪ್ರಶಸ್ತಿ ಪಡೆದ ರಾಮೇನಹಳ್ಳಿಯ ಪುಟ್ಟಸ್ವಾಮಿ ಅವರನ್ನು ಗೌರವಿಸಲಾಯಿತು ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೋರೇಗೌಡ, ಮಾದೇಗೌಡ, ಕೆ.ಬಸವರಾಜಪ್ಪ, ಕುಮಾರಸ್ವಾಮಿ, ರವಿ ಅವರನ್ನು ಸನ್ಮಾನಿಸಲಾಯಿತು. ಹಳ್ಳಿಮೈಸೂರು ಕೃಷಿ ಕೇಂದ್ರದ ಅಧಿಕಾರಿ ಹೇಮಾವತಿ ಸ್ವಾಗತಿಸಿದರು ಹಾಗೂ ಪಟ್ಟಣದ ಕೃಷಿ ಇಲಾಖೆ ಅಧಿಕಾರಿ ರಾಹುಲ್ ನಿರೂಪಿಸಿದರು.
ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ತಾಪಂ ಇಒ ಮುನಿರಾಜು, ರೈತ ಸಂಘದ ಅಧ್ಯಕ್ಷ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಹೊಯ್ಸಳ ಎಸ್. ಅಪ್ಪಾಜಿ, ಇತರರು ಇದ್ದರು.