ಸಾರಾಂಶ
ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಳಿತಿಲ್ಲ, ಮೋಜು, ಮಸ್ತಿ ಮಾಡುತ್ತಿಲ್ಲ. ರೈತರ ಕಷ್ಟ-ಸುಖಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತಿದ್ದೇನೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಬೆಳಗಾವಿ : ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಳಿತಿಲ್ಲ, ಮೋಜು, ಮಸ್ತಿ ಮಾಡುತ್ತಿಲ್ಲ. ರೈತರ ಕಷ್ಟ-ಸುಖಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತಿದ್ದೇನೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬೇಕಾದರೆ ನಾಳೆನೇ ಹೋಗಿ ರಾಜೀನಾಮೆ ನೀಡುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಅವರು ಮತ್ತೆ ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಗವಾಡ ವಿಧಾನಸಭಾ ಕ್ಷೇತ್ರದ ತಾವಂಶಿ ಗ್ರಾಮದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ವಿಧಾನಸೌಧದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಒಬ್ಬ ಮಂತ್ರಿಗೆ ಹೇಳಿದೆ. ಆದರೆ, ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿಯಾ? ನಿನ್ನ ಕೆಲಸ ಮಾಡಿಕೊಡ್ತೀವಿ ಎಂದು ಮಂತ್ರಿಗಳು ಹೇಳಿದರು ಎಂದು ಕ್ಷೇತ್ರದ ಜನತೆ ಎದುರು ತಮ್ಮ ಅಸಹಾಯಕತೆ ತೋಡಿಕೊಂಡರು.ಆಡಳಿತ ಪಕ್ಷದ ಶಾಸಕನಾಗಿ ನನ್ನ ಅಸಹಾಯಕತೆ ಬಗ್ಗೆ ಹೇಳುತ್ತಿದ್ದೇನೆ ಎಂದರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಸರ್ಕಾರದ ನಡೆಯಿಂದಾಗಿ ನನ್ನ ಮನಸಿಗೆ ಬಹಳ ನೋವಾಗಿದೆ. ಹೀಗಾಗಿ ಮುಂದಿನ ಬಾರಿ ನಾನು ಎಂಎಲ್ಎ ಆಗುವುದು ಬೇಕಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತಪರ ಯೋಜನೆಗಳೇ ಬರುತ್ತಿಲ್ಲ. ರೈತರು ಬದುಕು ನಡೆಸುವುದು ದುಸ್ತರವಾಗಿದೆ. ರೈತ ಒಂದು ವರ್ಷ ಬೆಳೆ ಬೆಳೆಯುವುದನ್ನು ಬಿಟ್ಟರೆ ನೀವೇನು ತಿಂತೀರಿ? ನಿಮ್ಮ ಬಳಿ ಹಣ, ಬಂಗಾರ ಬೆಳ್ಳಿ ಸಾಕಷ್ಟಿರಬಹುದು. ಅದನ್ನು ತಿಂದು ಬದುಕೋಕಾಗುತ್ತಾ? ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ. ರೈತರು ಬದುಕಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))