ಸಾರಾಂಶ
ಸಿಎಂ. ಡಿಸಿಎಂ ಎಲ್ಲರಲ್ಲೂ ಅನುದಾನಕ್ಕೆ ಬೇಡಿದೆ. ಸ್ಪಂದಿಸಿಲ್ಲ. ಉಸ್ತುವಾರಿ ಸಚಿವರಿಗೆ ಅನುದಾನ ಕೇಳಿದರೆ ಅನುದಾನ ಕೊಟ್ಟಿಲ್ಲ. ಜೆಡಿಎಸ್ ಶಾಸಕರಿದ್ದಾರೆ ಎಂದು ಅನುದಾನ ಕೊಡಲ್ಲ ಅನ್ನುತ್ತಿದ್ದಾರೆ. ಈ ಹಿಂದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಈಗ ಒಂದೇ ಒಂದು ಆಶ್ರಯ ಯೋಜನೆ ಮನೆ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಜೋತು ಬಿದ್ದು ಅಭಿವೃದ್ಧಿ ಮರೆತಿದೆ. ವಿ.ಪಕ್ಷ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕ ಎಚ್.ಟಿ.ಮಂಜು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎದುರು ಅಸಹಾಯಕತೆ ವ್ಯಕ್ತಪಡಿಸಿದರು.ಕೆ.ಆರ್.ಪೇಟೆ ತಾಲೂಕಿನ ವಡಕಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಾನೊಬ್ಬನೇ ಜೆಡಿಎಸ್ ಶಾಸಕನಾಗಿರುವೆ. ಅನುದಾನ ನೀಡದೆ ಕಾಂಗ್ರೆಸ್ ಸರ್ಕಾರ ಹಿಂಸೆ ನೀಡುತ್ತಿದೆ ಎಂದು ದೂರಿದರು.
ನನಗೆ ಯಾಕಾದರೂ ಶಾಸಕನಾಗಿದ್ದೇನೆ ಎನ್ನಿಸುತ್ತಿದೆ. ಕ್ಷೇತ್ರದಲ್ಲಿ ಒಂದೇ ಒಂದು ಕೆಲಸ ಮಾಡಲು ಆಗುತ್ತಿಲ್ಲ. ಶಾಸಕನಾಗುವ ಮೊದಲು ಸಾಕಷ್ಟು ಕನಸು ಇಟ್ಟುಕೊಂಡಿದ್ದೆ. ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.ಸಿಎಂ. ಡಿಸಿಎಂ ಎಲ್ಲರಲ್ಲೂ ಅನುದಾನಕ್ಕೆ ಬೇಡಿದೆ. ಸ್ಪಂದಿಸಿಲ್ಲ. ಉಸ್ತುವಾರಿ ಸಚಿವರಿಗೆ ಅನುದಾನ ಕೇಳಿದರೆ ಅನುದಾನ ಕೊಟ್ಟಿಲ್ಲ. ಜೆಡಿಎಸ್ ಶಾಸಕರಿದ್ದಾರೆ ಎಂದು ಅನುದಾನ ಕೊಡಲ್ಲ ಅನ್ನುತ್ತಿದ್ದಾರೆ. ಈ ಹಿಂದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು. ಈಗ ಒಂದೇ ಒಂದು ಆಶ್ರಯ ಯೋಜನೆ ಮನೆ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಕೆರೆ, ಏರಿ, ಸೇತುವೆ ದುರಸ್ತಿಯಾಗಿಲ್ಲ. ಇದೇ ರೀತಿ ಅನುದಾನ ಸಿಗದಿದ್ದರೆ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ? ಈ ಹಿಂದೆ ಹೆಚ್ಚು ಪರಿಹಾರ ನಿಧಿ ಬಿಡುಗಡೆ ಮಾಡಿದ ಸಿಎಂ ಅಂದರೆ ಅದು ಕುಮಾರಸ್ವಾಮಿ ಮಾತ್ರ. ಆದ್ದರಿಂದಲೇ ಕುಮಾರಸ್ವಾಮಿ ಅವರಿಗೆ ನಮ್ಮ ನಿರೀಕ್ಷೆಗೂ ಮೀರಿ ಜಿಲ್ಲೆ ಜನತೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.ನಮ್ಮ ಜೊತೆ ಕುಮಾರಸ್ವಾಮಿ ಅವರು ಇರುತ್ತೇನೆ ಎಂದಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡದಿದ್ದರೆ ಧರಣಿ, ಹೋರಾಟದ ಜೊತೆಗೆ ಕೆ.ಆರ್. ಪೇಟೆಯಿಂದ ಮಂಡ್ಯದವರೆಗೂ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದರು.