ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಸರ್ಕಾರ: ಬಿ.ವೈ.ರಾಘವೇಂದ್ರ

| Published : Oct 22 2025, 01:03 AM IST

ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಸರ್ಕಾರ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ಕುರಿತಂತೆ ಜನಸಾಮಾನ್ಯರು, ಮಾಧ್ಯಮಗಳು ಹೇಳುತ್ತಿರುವುದನ್ನು ಕೇಳಿಸಿ ಕೊಂಡಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟಾಚಾರದ ಕುರಿತು ದಾಖಲೆಗಳನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದ್ದಾರೆ.

ಶಿವಮೊಗ್ಗ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ಕುರಿತಂತೆ ಜನಸಾಮಾನ್ಯರು, ಮಾಧ್ಯಮಗಳು ಹೇಳುತ್ತಿರುವುದನ್ನು ಕೇಳಿಸಿ ಕೊಂಡಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟಾಚಾರದ ಕುರಿತು ದಾಖಲೆಗಳನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಲೇವಡಿ ಮಾಡಿದ್ದಾರೆ.

ಭ್ರಷ್ಟಾಚಾರದಲ್ಲಿ ದಾಖಲೆ ಬರೆಯುತ್ತಿರುವ ಕಾಂಗ್ರೆಸ್ ಸರ್ಕಾರ, ಪ್ರತಿಪಕ್ಷಗಳ ಬಳಿ ದಾಖಲೆ ಕೇಳುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಸುಮಾರು 33 ಸಾವಿರ ಕೋಟಿ ರು. ಬಿಲ್ ಮೊತ್ತದ ಕ್ಲಿಯರ್ ಆಗದೆ ಬಾಕಿ ಉಳಿದಿದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಆರೋಪಿಸಿದೆ.

ಬೆಂಗಳೂರಿನ ರಸ್ತೆ ಗುಂಡಿಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರೂ, ಉದ್ಯಮ ವಲಯದ ವಿರುದ್ಧ ಹರಿಹಾಯ್ದದ್ದಷ್ಟೇ ಈ ಸರ್ಕಾರದ ಸಾಧನೆಯಾಗಿದೆ. ಈ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಸೇವೆಗಾಗಿ ಅಲ್ಲ, ಬದಲಾಗಿ ಹೈಕಮಾಂಡ್ ಸೇವೆಗಾಗಿ ವ್ಯವಸ್ಥಿತ ಭ್ರಷ್ಟಾಚಾರದ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾನು ಕಣ್ಣು ಮುಚ್ಚಿ ಹಾಲು ಕುಡಿದು, ಕುಡಿದಿಲ್ಲ ಎಂದು ಹೇಳುವ ಈ ಕಾಂಗ್ರೆಸ್ ನಾಯಕರಲ್ಲಿ ನೈತಿಕತೆ ಎಲ್ಲಿ ಉಳಿದಿದೆ ಎಂದು ಪ್ರಶ್ನಿಸಿದ್ದಾರೆ.

ಜನಪ್ರತಿನಿಧಿಗಳು ಜನರಪರವಾಗಿ ಮಾತನಾಡಿದರೆ, ಸುಳ್ಳುಗಳು, ಅಧಿಕಾರದ ದರ್ಪ, ಉಡಾಫೆಯಿಂದ ಪ್ರತಿಕ್ರಿಯೆ ನೀಡುವುದೇ ಕಾಂಗ್ರೆಸ್ ಸಚಿವರು ದೊಡ್ಡಸ್ತಿಕೆ ಎಂದುಕೊಂಡಿದ್ದಾರೆ. ರಾಜ್ಯದ ಅತ್ಯಂತ ದುರ್ಬಲ ಸಮುದಾಯಗಳ ಕಲ್ಯಾಣಕ್ಕಾಗಿ ನಿಗದಿಯಾಗಿದ್ದ ಕೋಟಿಗಟ್ಟಲೆ ಹಣದ ಲೂಟಿ, ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಈ ಸರ್ಕಾರದ್ದೇ ಕರ್ಮಕಾಂಡವಲ್ಲವೇ? ಎಂದು ಹೇಳಿದ್ದಾರೆ.

ದುರಂತವೆಂದರೆ, ನಮ್ಮ ಜಿಲ್ಲೆಯ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡರೂ, ಇವರದ್ದೇ ಸಚಿವ ರಾಜೀನಾಮೆ ನೀಡಿ, ಬಂಧಿಸಲ್ಪಟ್ಟರೂ, ಕಿಂಚಿತ್ತೂ ಸಂವೇದನೆ, ನೈತಿಕತೆ ಇಲ್ಲದೆ ಭ್ರಷ್ಟಾಚಾರದ ದಾಖಲೆ ಕೇಳುತ್ತಿದ್ದಾರೆ! ಮುಡಾ ಭೂ ಹಂಚಿಕೆ ವಿವಾದ, ಕಾಂಗ್ರೆಸ್ ಶಾಸಕರ ಮೇಲೆ ಇಡಿ ದಾಳಿ ನಡೆದು, ಕೋಟಿಗಟ್ಟಲೆ ಅಕ್ರಮಕ್ಕೆ, ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆ.ಸಿ.ವೀರೇಂದ್ರ, ಸತೀಶ್ ಸೈಲ್, ಇದಕ್ಕೂ ಮುನ್ನ ನಾಗೇಂದ್ರ ಸೇರಿದಂತೆ ಹಲವು ಶಾಸಕರು ಬಂಧಿತರಾಗಿದ್ದರೂ, ಸರ್ಕಾರದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ನಾಯಕರು ದಾಖಲೆ ಕೇಳುತ್ತಾರೆ ಎಂದರೆ ಅದಕ್ಕಿಂತಲೂ ನೈತಿಕ ಅಧಃಪತನದ ಪುರಾವೆ ಇನ್ನೇನು ಬೇಕು ಎಂದು ಹೇಳಿದ್ದಾರೆ.

ಕೇವಲ ಈ ಎರಡು ವರ್ಷಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹಾಳುಗೆಡವಿ, ಜನಸಾಮಾನ್ಯರ ನಿತ್ಯಬಳಕೆ ವಸ್ತುಗಳ ಮೇಲಿನ ಬೆಲೆ ಏರಿಕೆ ಮಾಡಿ, ಜನರಿಗೆ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸಲಾಗದೆ, ತನ್ನ ಅಸಮರ್ಥತೆ ಮತ್ತು ಭ್ರಷ್ಟಾಚಾರಗಳನ್ನು ತಾನೇ ಸಾಬೀತು ಮಾಡಿರುವ ಈ ಕಾಂಗ್ರೆಸ್ ಸರ್ಕಾರ, ಇನ್ನೂ ಇದೆಲ್ಲದ್ದಕ್ಕೆ ದಾಖಲೆ ಕೇಳುತ್ತಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನೇ ಬೇರೆಡೆಗೆ ಸೆಳೆಯಲು, ಆರ್‌ಎಸ್‌ಎಸ್ ಸಂಘದ ನಿಷೇಧ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುಂದು ಮಾಡುವ, ತನ್ನ ಓಟ್ ಬ್ಯಾಂಕ್ ತುಷ್ಟೀಕರಣದ ನಿಮ್ಮ ತಂತ್ರ ಫಲಿಸುವುದಿಲ್ಲ ಎಂದು ಹೇಳಿದ್ದಾರೆ.

ನಿಮ್ಮ ಭ್ರಷ್ಟ ಸರ್ಕಾರದ ವಿರುದ್ಧ ನಮ್ಮ ಪಕ್ಷದ ಹೋರಾಟ ನಿಲ್ಲುವುದಿಲ್ಲ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಜನರ ಆಕ್ರೋಶ ಸ್ಪಷ್ಟವಾಗಿ ಕಾಣುತ್ತಿದೆ. ಈ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳಿಗೆ ಅದು ಶೀಘ್ರವೇ ಬೆಲೆ ತೆರಬೇಕಾಗಲಿದೆ ಎಂದಿದ್ದಾರೆ.