ಸಾರಾಂಶ
ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಮೇಲೆ ಕಣ್ಣಿಡಲು ಮುಖ ಗುರುತು ಪತ್ತೆ ಆಧಾರಿತ ಹಾಜರಾತಿ (ಫೇಸ್ ರೆಕಗ್ನೈಜೇಷನ್) ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸದನಕ್ಕೆ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ ಸದಸ್ಯ ತಳವಾರ ಸಾಬಣ್ಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುವುದಿಲ್ಲ. ಗೈರು ಹಾಜರಾಗುವುದರಿಂದ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತದೆ. ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಗೈರು ಹಾಜರಿಯ ಹಿಂದೆ ಪಾಲಕರ ತಪ್ಪು ಕೂಡ ಇದೆ. ಹೀಗಾಗಿ, ಹಾಲಿ ಇರುವ ಸ್ಟುಡೆಂಟ್ಸ್ ಅಟೆಂಡೆನ್ಸ್ ಟ್ರ್ಯಾಕಿಂಗ್ ಸಿಸ್ಟಮ್(ಸ್ಯಾಟ್ಸ್) ಜೊತೆಗೆ ಫೇಸ್ ರೆಕಗ್ನೈಜೇಷನ್ ವ್ಯವಸ್ಥೆ ಜಾರಿಗೆ ತರಲು ಯೋಚಿಸಲಾಗಿದೆ ಎಂದರು.
ಶಿಕ್ಷಕರ ಕೊರತೆ ನೀಗಿಸಲು 10,000 ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದರಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೇ 6,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.