ಲಿಂಗಸುಗೂರು ತಾಲೂಕಿನಲ್ಲಿ ಅಬಕಾರಿ ಸಚಿವರಿಂದ ಸರ್ಕಾರಿ ಭೂಮಿ ಅತಿಕ್ರಮಣ ಆರೋಪ : ದೂರು

| Published : Sep 17 2024, 12:48 AM IST / Updated: Sep 17 2024, 01:17 PM IST

ಲಿಂಗಸುಗೂರು ತಾಲೂಕಿನಲ್ಲಿ ಅಬಕಾರಿ ಸಚಿವರಿಂದ ಸರ್ಕಾರಿ ಭೂಮಿ ಅತಿಕ್ರಮಣ ಆರೋಪ : ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಅವರು ಸರ್ಕಾರಿ ಭೂಮಿ ಅತಿಕ್ರಮಣ ಮಾಡಿದ ಆರೋಪ ಕೇಳಿಬಂದಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ರೈತರಿಂದ ಭೂಮಿ ಕಬಳಿಸಿದ್ದಾರೆ ಎಂದು ರೈತ ಸಂಘದ ಮುಖಂಡರು ದೂರು ನೀಡಿದ್ದಾರೆ.

  ಲಿಂಗಸುಗೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಮಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿರುವ ಮಧ್ಯೆಯೇ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಅವರು ಸರ್ಕಾರಿ ಭೂಮಿ ಅತಿಕ್ರಮಣ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

ರೈತ ಸಂಘದ ವೀರಭದ್ರಪ್ಪ ಜಡಪದ, ಬಸವರಾಜ ಬಡಿಗೇರ, ತಿಪ್ಪಣ್ಣ ಚಿಕ್ಕಹೆಸರೂರು, ಗಂಗಾಧರ ಗುಂತಗೋಳ ಲಿಂಗಸೂಗೂರು ತಹಸೀಲ್ದಾರ್‌ ಶಂಶಾಲಂ.ಎನ್‌ ಅವರಿಗೆ ದೂರು ನೀಡಿದ್ದು, ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಲಿಂಗಸುಗೂರು ಕಂದಾಯ ಹೋಬಳಿ ಸುಣಕಲ್ ಸೀಮೆಯಲ್ಲಿ ಅಬಕಾರಿ ಸಚಿವರು ಮೆ. ಆರ್.ಬಿ ಶುಗರ್ಸ ಲಿಮಿಟೆಡ್ ಕಾರ್ಖಾನೆ ಸ್ಥಾಪನೆ ಮಾಡಿದ್ದು ಇದಕ್ಕಾಗಿ ಸುಣಕಲ್ ಹಾಗೂ ಚಿಕ್ಕ ಉಪ್ಪೇರಿ ಗ್ರಾಮದ ಕೃಷ್ಣಾನದಿ ಹತ್ತಿರದಲ್ಲಿ ರೈತರಿಂದ 60 ಎಕರೆಗೂ ಅಧಿಕ ಭೂಮಿ ಖರೀದಿಸಿದ್ದಾರೆ. ಇದರಲ್ಲಿ ಪರಭಾರೆ ನಿಷೇಧಿತ ಜಮೀನೂ ಇದ್ದು ನಿಮಯ ಬಾಹಿರ ವಹಿವಾಟು ನಡೆದಿದೆ. ಬೂಲ್ಡೊಜರ್, ಹಿಟಾಚಿ, ಟಿಪ್ಪರ್ಗಳಿಂದ ಭೂಮಿ ಸಮತಟ್ಟು ಕಾರ್ಯ ನಡೆದಿದೆ. ಇದರಲ್ಲಿ ಸರ್ವೆ ಸಂಖ್ಯೆ 73, 23 ಎಕರೆ 38 ಗುಂಟೆ ಖಾರೇಜ್ ಖಾತಾ ಜಮೀನು ಪಹಣಿ ಹೊಂದಿರುವ ಹನುಮಪ್ಪ ತಂ. ಸಣ್ಣಪ್ಪ ಚೌಡಕಿ, ಹನುಮಪ್ಪ ಗದ್ದೆಪ್ಪ ಇವರ ಮೇಲೆ ದೌರ್ಜನ್ಯ ಮಾಡಿ ಗುಡಿಸಲುಗಳ ಕಿತ್ತು ಹಾಕಿ ಸಾಗುವಳಿ ಭೂಮಿ ಕಬ್ಜಾ ಮಾಡಿದ್ದಾರೆ ಎಂದು ದೂರಲಾಗಿದೆ.

ಸುಣಕಲ್ ಶಿವಾರದ ಖಾರೇಜ್ ಖಾತಾ ಸರ್ವೆ ಸಂಖ್ಯೆ 73ರಲ್ಲಿ 23 ಎಕರೆ 38 ಗುಂಟೆ, 85ರಲ್ಲಿ 10 ಗುಂಟೆ, ಸರ್ಕಾರದ ಜಮೀನು ಸರ್ವೆ ನಂ. 72/1, 8 ಎಕರೆ, 72/2ರಲ್ಲಿ 7ಎಕರೆ 14 ಗುಂಟೆ, 72/3ರಲ್ಲಿ 7 ಎಕರೆ 14 ಗುಂಟೆ, 68/1ರಲ್ಲಿ 24 ಎಕರೆ 27 ಗುಂಟೆ, 68/2ರಲ್ಲಿ 2 ಎಕರೆ, ಅರಣ್ಯ ಇಲಾಖೆ ಸೇರಿದ ಸರ್ವೆ ಸಂಖ್ಯೆ 80/3ರಲ್ಲಿ 1 ಎಕರೆ 19 ಗುಂಟೆ, 82/3ರಲ್ಲಿ 4 ಎಕರೆ 32 ಗುಂಟೆ, 83ರಲ್ಲಿ 5 ಎಕರೆ 20 ಗುಂಟೆ, 84ರಲ್ಲಿ 5 ಎಕರೆ 21 ಗುಂಟೆ, ಕಂದಾಯ ಭೂಮಿ 49 ಎಕರೆ, ಅರಣ್ಯ ಇಲಾಖೆಯ 43 ಎಕರೆ ಒಟ್ಟು 92 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಅಬಕಾರಿ ಸಚಿವರ ವಿರುದ್ದ ಲಿಂಗಸುಗೂರು ತಹಸೀಲ್ದಾರರಿಗೆ ದೂರು ನೀಡಲಾಗಿದೆ.

ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರು ಅರಣ್ಯ ಹಾಗೂ ಕಂದಾಯ ಇಲಾಖೆ ಭೂಮಿ ಕಬಳಿಕೆ ಮಾಡಿದ್ದು ಕೂಡಲೇ ಸ್ಥಳ ಪಂಚನಾಮೆ ಮಾಡಿ ಸಾರ್ವಜನಿಕ ಭೂ ಕಬಳಿಕೆ ಪ್ರತಿಬಂಧಕ ಕಾಯ್ದೆ 2011 ಹಾಗೂ ತದನಂತರ ಬಂದ ಇತರೇ ನಿಯಮಾವಳಿಗಳ ಅನ್ವಯ ಭೂ ಕಬಳಿಕೆ ಪ್ರಕರಣ ದಾಖಲಿಸಬೇಕೆಂದು ರೈತ ಸಂಘದ ವೀರಭದ್ರಪ್ಪ ಜಡಪದ, ಬಸವರಾಜ ಬಡಿಗೇರ, ತಿಪ್ಪಣ್ಣ ಚಿಕ್ಕಹೆಸರೂರು, ಗಂಗಾಧರ ಗುಂತಗೋಳ ತಹಸೀಲ್ದಾರರಿಗೆ ಒತ್ತಾಯಿಸಿದ್ದಾರೆ.

ಲಿಂಗಸುಗೂರು ಕಂದಾಯ ಹೋಬಳಿಯ ಸುಣಕಲ್ ಸೀಮೆಯ ಸಕ್ಕರೆ ಕಾರ್ಖಾನೆಗಾಗಿ ಭೂ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲೆ ಇನ್ನಿತರ ವಿಷಯಗಳನ್ನು ಪರಿಶೀಲಿಸುವಂತೆ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಿದ್ದು, ನಾನು ಸಹ ಶೀಘ್ರದಲ್ಲಿಯೇ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗುವುದು.

ಶಂಶಾಲಂ.ಎನ್‌, ತಹಸೀಲ್ದಾರ್‌, ಲಿಂಗಸುಗೂರು