ಸಾರಾಂಶ
ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಬಾಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ ಖಾಸಗಿ ವ್ಯಕ್ತಿಯೋರ್ವರು ಸರ್ಕಾರಿ ಜಾಗಕ್ಕೆ ತಂತಿಬೇಲಿ ಅಳವಡಿಸಿದ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆ, ವಂಡ್ಸೆ ಹೋಬಳಿ ಕಂದಾಯ ಇಲಾಖೆ ಕಾರ್ಯಾಚರಣೆ ನಡೆಸಿ ತಂತಿಬೇಲಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದ ಘಟನೆ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಬಾಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ ಖಾಸಗಿ ವ್ಯಕ್ತಿಯೋರ್ವರು ಸರ್ಕಾರಿ ಜಾಗಕ್ಕೆ ತಂತಿಬೇಲಿ ಅಳವಡಿಸಿದ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆ, ವಂಡ್ಸೆ ಹೋಬಳಿ ಕಂದಾಯ ಇಲಾಖೆ ಕಾರ್ಯಾಚರಣೆ ನಡೆಸಿ ತಂತಿಬೇಲಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದ ಘಟನೆ ಗುರುವಾರ ನಡೆದಿದೆ.ವಾರಗಳ ಹಿಂದೆ ಬಾಂಡ್ಯ ಸರ್ಕಾರಿ ಶಾಲೆಯ ಹಿಂಭಾಗ ಕೊಡ್ಲಾಡಿ ಗ್ರಾಮದ ಸುಮಾರು 10 ಎಕರೆ ವಿಸ್ತೀರ್ಣವುಳ್ಳ ಸರ್ಕಾರಿ ಅರಣ್ಯ ಪ್ರದೇಶಕ್ಕೆ, ಸರ್ಕಾರಿ ಜಾಗದ ಸಮೀಪದಲ್ಲಿ ಪಟ್ಟಾ ಜಾಗವನ್ನು ಹೊಂದಿದ ಒಂದೇ ಕುಟುಂಬದ ಖಾಸಗಿ ವ್ಯಕ್ತಿಗಳು ಈ ಭೂಮಿ ಒತ್ತುವರಿ ಮಾಡುವ ಉದ್ದೇಶದಿಂದ ಜಾಗದ ಸುತ್ತಲೂ ಬೇಲಿ ಅಳವಡಿಸಿದಲ್ಲದೆ, ಸರ್ಕಾರಿ ಜಾಗದ ನಡುವೆಯೇ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯಲ್ಲಿಯೂ ಪ್ರಕರಣ ದಾಖಲಾಗಿದೆ.ಸರ್ಕಾರಿ ಜಮೀನು ಒತ್ತುವರಿ ದೂರು ಬಂದ ಹಿನ್ನೆಲೆ ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಆದೇಶದಂತೆ ಗುರುವಾರ ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಹೋಬಳಿಯ 15 ಮಂದಿ ಗ್ರಾಮ ಆಡಳಿತಾಧಿಕಾರಿಗಳು, 15 ಗ್ರಾಮ ಸಹಾಯಕರು ಸಹಿತ 35ಕ್ಕೂ ಅಧಿಕ ಸಿಬ್ಬಂದಿ ಅಳವಡಿಸಿದ್ದ ಬೇಲಿ ತೆರವುಗೊಳಿಸಿ ಸೂಚನಾ ಫಲಕ ಅಳವಡಿಸಿದ್ದಾರೆ. .........ಕೊಡ್ಲಾಡಿ ಗ್ರಾಮದಲ್ಲಿ ಸರ್ಕಾರಿ ಭಾಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕಳೆದ ವಾರ ದೂರು ಬಂದ ಹಿನ್ನೆಲೆ ಕಂದಾಯ ನಿರೀಕ್ಷಕರಿಗೆ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿತ್ತು. ಅದರಂತೆಯೇ ಗುರುವಾರ ವಂಡ್ಸೆ ಹೋಬಳಿಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ಪಡೆಯಲಾಗಿದ್ದು, ಆ ಸ್ಥಳದಲ್ಲಿ ಸರ್ಕಾರಿ ಜಮೀನು ಅತಿಕ್ರಮಿಸಬಾರದು ಎಂದು ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಮುಂದಿನ ದಿನದಲ್ಲಿ ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗುತ್ತದೆ.
। ಪ್ರದೀಪ್ ಕುರ್ಡೇಕರ್, ಕುಂದಾಪುರ ತಹಸೀಲ್ದಾರ್