ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾಗಿರುತ್ತದೆ ಎಂದು ಆರ್ಥಿಕ ಇಲಾಖೆ ತಿರಸ್ಕರಿಸಿ 27-9-2025 ರಂದು ಹಿಂಬರಹ ನೀಡಿತ್ತು.

ಸಿ.ಕೆ. ನಾಗರಾಜ ಹೊಸಪೇಟೆ

ಸ್ಥಳೀಯರು, ಸಂಘ-ಸಂಸ್ಥೆ, ಕೆಲ ಜನಪ್ರತಿನಿಧಿಗಳ ವಿರೋಧ ಹಾಗೂ ಆರ್ಥಿಕ ಇಲಾಖೆ ತಿರಸ್ಕಾರದ ನಡುವೆ ಹೊಸಪೇಟೆಯ ಗಣಿ ಕಂಪನಿ ಆರ್‌ಬಿಎಸ್‌ಎಸ್‌ಎನ್‌ಗೆ 64.50 ಎಕರೆ ಮತ್ತು ಎಂಎಸ್‌ಪಿಎಲ್‌ಗೆ 22.73 ಎಕರೆ ಜಮೀನು 30 ವರ್ಷ ಅವಧಿಗೆ ಲೀಜ್‌ ನೀಡುವ ಪ್ರಸ್ತಾವನೆಗೆ ರಾಜ್ಯ ಸಂಪುಟ ಸಭೆ ಅಂಗೀಕಾರ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸಪೇಟೆ ನಗರಸಭೆಯಿಂದ ಕೇವಲ 5 ಕಿಮೀ ವ್ಯಾಪ್ತಿಯೊಳಗೆ ಇರುವ ಕಾರಿಗನೂರ ಗ್ರಾಮದ ಸರ್ವೇ ನಂ.185/2 ರಲ್ಲಿ 64.50 ಎಕರೆ ಪ್ರದೇಶವನ್ನು 1991ರಲ್ಲಿ ಆರ್‌ಬಿಎಸ್‌ಎಸ್‌ಎನ್‌ ಗಣಿ ಕಂಪನಿಗೆ ಗುತ್ತಿಗೆ ನೀಡಿತ್ತು. ಅದು 2008 ರಿಂದ ಕಾರ್ಯ ನಿರ್ವಹಿಸಿದ್ದು, 26-6-2026 ರಂದು ಕಂಪನಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಮತ್ತೆ 30 ವರ್ಷಗಳ ಅವಧಿಗೆ ಜಮೀನನ್ನು ಗುತ್ತಿಗೆ ಮುಂದುವರೆಸುವಂತೆ ಕೋರಿ ಆ ಕಂಪೆನಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿತ್ತು.

ಸ್ಥಳೀಯ ಜನರ ವಿರೋಧದ ನಡುವೆ ಹೊಸಪೇಟೆಯಿಂದ ಕೇವಲ 5 ಕಿಮೀ ದೂರದಲ್ಲಿರುವ ಕಾರಿಗನೂರಿನಲ್ಲಿ ಆರ್‌ಬಿಎಸ್‌ಎಸ್‌ಎನ್ ಕಂಪನಿಯ ಬೆನಿಫಿಕೇಷನ್ ಪ್ಲಾಂಟ್ ಉದ್ದೇಶಕ್ಕಾಗಿ ಕಂಪನಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಸರಾಸಗಟಾಗಿ ತಿರಸ್ಕರಿಸಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮ 1996 ರ ನಿಯಮ 22 ಎ (2) ಅಡಿಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನು ಯಾವುದೇ ಖಾಸಗಿ ವ್ಯಕ್ತಿ ಅಥವಾ ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡತಕ್ಕದ್ದಲ್ಲ. ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಬೇಕಾಗಿರುತ್ತದೆ ಎಂದು ಆರ್ಥಿಕ ಇಲಾಖೆ ತಿರಸ್ಕರಿಸಿ 27-9-2025 ರಂದು ಹಿಂಬರಹ ನೀಡಿತ್ತು.

13-3-2026 ರಂದು ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದನ್ವಯ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ ಎಂದು ಆಡಳಿತ ಇಲಾಖೆ ತಿಳಿಸಿತ್ತು. ಆದರೂ ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಸಂಪುಟ ಸಭೆಗೆ ಈ ಪ್ರಸ್ತಾವನೆ ಬಂದು ಕಂಪನಿಯ ಅಪೇಕ್ಷೆಯಂತೆ 64.50 ಎಕರೆ ಜಮೀನನ್ನು ಮತ್ತೆ 30 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರಿಸಿ ಒಪ್ಪಿಗೆ ನೀಡಲಾಗಿದೆ.

ಹೊಸಪೇಟೆ ನಗರದ ಅಮಾವತಿಯಲ್ಲಿ ಎಂಎಸ್‌ಪಿಎಲ್‌ ಗ್ಯಾಸಸ್‌ ಲಿಮಿಟೆಡ್‌ ಇವರಿಗೆ 22.73 ಎಕರೆ ಜಮೀನನ್ನು ಪವನ ವಿದ್ಯುತ್‌ ಯೋಜನೆಗಾಗಿ ಮಂಜೂರು ಮಾಡಿದೆ. ಹೊಸಪೇಟೆ ನಗರವು ಪ್ರವಾಸೋದ್ಯಮ ಕೇಂದ್ರವಾಗಿದ್ದು, ಪಕ್ಕದಲ್ಲೇ ವಿಶ್ವವಿಖ್ಯಾತ ಹಂಪಿ ಇದೆ. ಸುತ್ತಮುತ್ತಲಿನ ಗ್ರಾಮಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತವೆ. ಮತ್ತೊಂದೆಡೆಗೆ ತುಂಗಭದ್ರಾ ಜಲಾಶಯವಿದೆ. ಹಂಪಿ, ತುಂಗಭದ್ರಾ ಜಲಾಶಯ, ಗಣಿಗಾರಿಕೆ ಇರುವುದರಿಂದ ಹೊಸಪೇಟೆ ನಗರದಲ್ಲಿರುವ ಸರ್ಕಾರಿ ಜಮೀನು ಹೆಚ್ಚು ಇಲ್ಲ. ಇರುವ ಸರ್ಕಾರಿ ಜಮೀನು ಗಣಿ ಉದ್ಯಮಿಗಳ‍ ಕಂಪನಿಗಳಿಗೆ ಲೀಜ್‌ ನೀಡಿದರೆ ಶೈಕ್ಷಣಿಕ ಕಟ್ಟಡ ,ಆಸ್ಪತ್ರೆ ಕಟ್ಟಡ ಸೇರಿದಂತೆ ಬಡವರಿಗೆ ನಿವೇಶನ ನೀಡಲು ಸರ್ಕಾರಿ ಜಮೀನುಗಳೇ ಇಲ್ಲದಾಗಿರುವುದರಿಂದ ಸರ್ಕಾರ ಗಣಿ ಉದ್ಯಮಿಗಳಿಗೆ ಸರ್ಕಾರಿ ಜಮೀನು ಲೀಜ್‌ ನೀಡಿರುವ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ ನಗರದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮತ್ತು ಸಕ್ಕರೆ ಕಾರ್ಖಾನೆ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳಿಗೆ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಹೊಸಪೇಟೆಯ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಲೀಜ್‌ ನೀಡಬಾರದು ಎಂದು ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ, ಆದರೂ ಸರ್ಕಾರ ಮತ್ತೆ 30 ವರ್ಷಗಳ ಅವಧಿಗೆ ಲೀಜ್‌ ನೀಡಿರುವುದು. ಸ್ಥಳೀಯರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಮಾಜಿ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ.