ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನಾದ್ಯಂತ ನಕಲಿ ದಾಖಲೆಗಳ ಸೃಷ್ಟಿಸಿಕೊಂಡು ಅಕ್ರಮವಾಗಿ ಸರ್ಕಾರಿ ಭೂಮಿ ಲೂಟಿ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಮಿನಿ ವಿಧಾನ ಸೌಧದಲ್ಲಿರುವ ಎಡಿಎಲ್‌ಆರ್ ಕಚೇರಿಗೆ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಸರ್ವೇ ಇಲಾಖೆಯ ಎಡಿಎಲ್‌ಆರ್ ವಿರುದ್ಧ ನಕಲು ಮಾಡಿರುವ ದಾಖಲೆಗಳ ತೋರಿಸಿ ಘೋಷಣೆಗಳ ಕೂಗಿದರು.
ಅಕ್ರಮ ಭೂಮಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಕೇಳಿ ಎಂದು ಸೂಕ್ತವಲ್ಲದ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ಎಡಿಎಲ್‌ಆರ್ ಮೇಘ ಅವರಿಗೆ ಕೆ.ಎಸ್ ನಂಜುಂಡೇಗೌಡ ತರಾಟೆ ತೆಗೆದುಕೊಂಡರು.ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಇಲಾಖೆ ಅಧಿಕಾರಿಗಳ ಮೇಲೆ ಹೀಗೆ ಒಬ್ಬರ ಮೇಲೊಬ್ಬರು ಸರ್ಕಾರಿ ಭೂಮಿಯನ್ನು ಉಳ್ಳವರ ಪಾಲು ಮಾಡಲು ಭೂ ಮಾಫಿಯಾದವರ ಜೊತೆ ಶಾಮೀಲಾಗಿ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭೂಗಳ್ಳರ ದಾಖಲಾತಿಗಳನ್ನು ಪರಿಸೀಲಿಸಿ ಭೂ ಮಾಫಿಯಾಗೆ ಕಡಿವಾಣ ಹಾಕಿಬೇಕು. ಕೂಡಲೇ ಸೂಕ್ತ ಮಾಹಿತಿಗಳ ನೀಡಬೇಕು. ಇಲ್ಲದಿದ್ದರೆ ಸರ್ವೇ ಕಾರ್ಯ ಮಾಡದೆ ತಡೆಹಿಡಿಯಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.ಒಂದೇ ಕುಟುಂಬಗಳಿಗೆ ಮಂಜುರು:
ತಾಲೂಕಿನ ಬೆಳಗೊಳ ಹೋಬಳಿಯ ಬೀಚನಕುಪ್ಪೆ ಸರ್ವೇ ನಂ.76ರಲ್ಲಿ ಯಾವುದೇ ಸೂಕ್ತ ದಾಖಲೆಗಳು ಹೊಂದಿದ್ದರೂ ನಕಲಿ ದಾಖಲೆಗಳ ಮೂಲಕ 50 ಎಕರೆ ಸರ್ಕಾರಿ ಭೂಮಿಯನ್ನು ಒಂದೇ ಕುಟುಂಬಕ್ಕೆ ಮಂಜೂರು ಮಾಡಿರುವ ಇಲಾಖೆಗಳು ಇದರಲ್ಲಿ ಸಾಮೀಲಾಗಿದ್ದು, ಭೂ ಮಾಫಿಯಾದ ಶ್ರೀಮಂತರು ಅಕ್ರಮವಾಗಿ ಲೂಟಿ ಮಾಡಿದ್ದಾರೆ ಎಂದು ದೂರಿದರು.ಸರ್ವೇ ಹಾಗೂ ಕಂದಾಯ ಅಧಿಕಾರಿಗಳು ಸಹ ದಾಖಲೆಗಳ ತಿರುಚಿ ನಕಲಿ ಸೃಷ್ಟಿ ಮಾಡುವಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗಿ ಕೇವಲ ಪಹಣಿ ಪತ್ರದ ಆಧಾರದ ಮೇಲೆ ಹದ್ದು ಬಸ್ತು ಮಾಡಿಕೊಡಲು ಮುಂದಾಗಿದ್ದಾರೆ. ಇದರ ಜೊತೆ ಇಂತಹದೆ ಪ್ರಕರಣವನ್ನು ಕಸಬಾ ಹೋಬಳಿಯ ಬೆಳವಾಡಿ ಗ್ರಾಮದ ಸರ್ವೇ ನಂ.64ರಲ್ಲಿನ ಅರಣ್ಯ ಪ್ರದೇಶ ಎಂದು ಉಲ್ಲೇಖವಿರುವ 25 ಎಕರೆಯಷ್ಟು ಭೂಮಿ ಈಗ ಮಾಯಾವಾಗಿದೆ ಎಂದು ಆರೋಪಿಸಿದರು.
ಇಲ್ಲಿ ಖಾಸಗಿ ಲೇಔಟ್‌ಗಳು ಅಕ್ರಮವಾಗಿ ನಿರ್ಮಾಣಗೊಳ್ಳುತ್ತಿವೆ. ಬೀಚನಕುಪ್ಪೆಯ ಅಕ್ರಮವನ್ನು ರೈತರು ಈಗ ಪತ್ತೆಹಚ್ಚಿದ್ದು, ಸಂಬಂಧಪಟ್ಟ ಭೂಮಿಯು ಅಪರಿಚಿತ ವ್ಯಕ್ತಿಗೆ ಸರ್ಕಾರ ಮಂಜೂರು ಮಾಡಿದ ಮಂಜೂರಾತಿ ಪತ್ರ ಹಾಗೂ ಸ್ಥಳ ಗುರುತು ಮಾಡಿರುವ ದಾಖಲೆಗಳ ಸಹಿತ ತಂದು ಎಡಿಎಆರ್ ಅವರಿಗೆ ರೈತರೇ ಒದಗಿಸಿ ಪರಿಶೀಲಿಸಲು ಆಗ್ರಹಿಸಿದರು.ನಂತರ ರೈತರನ್ನು ಉದ್ದೇಶಿಸಿ ಎಡಿಎಲ್‌ಆರ್ ಮೇಘ ಅವರು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಸರ್ವೆ ಕಾರ್ಯವನ್ನು ಅಲ್ಲಿವರೆಗೆ ತಡೆಹಿಡಿಯಲಾಗುತ್ತದೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡವಾಡಿ ಮಹದೇವು, ಶಿವಣ್ಣ, ಕಾರ್ಯಕರ್ತರಾದ ಹೆಬ್ಬಾಡಿ ಸಿದ್ದೇಗೌಡ, ಸುರೇಶ್, ಕಡತನಾಳು ಬಾಬು, ಮಂಜುನಾಥ್, ಶಂಕರೇಗೌಡ, ಮಹೇಶ್, ಶಿವರಾಜು, ನಿಂಗೇಗೌಡ, ಕಿರಂಗೂರು ಮಹದೇವು, ಕೃಷ್ಣಗೌಡ ಸೇರಿದಂತೆ ಇತರರು ಇದ್ದರು.