ಹಾವೇರಿ ವಿಶ್ವವಿದ್ಯಾಲಯ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ: ರುದ್ರಪ್ಪ ಲಮಾಣಿ ಭರವಸೆ

| Published : Feb 24 2025, 12:35 AM IST

ಹಾವೇರಿ ವಿಶ್ವವಿದ್ಯಾಲಯ ಉಳಿವಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ: ರುದ್ರಪ್ಪ ಲಮಾಣಿ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ಈ ವಿವಿಗಳಿಗೆ ಸೇರ್ಪಡೆಯಾಗಿರುವ 42 ಪದವಿ ಕಾಲೇಜುಗಳು ಮತ್ತು‌ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.

ಹಾವೇರಿ: ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಲು ಪ್ರಸ್ತುತ ರಾಜ್ಯ ಸರ್ಕಾರದ ಸಚಿವ ಸಂಪುಟ ಉಪಸಮಿತಿಯ ತೀರ್ಮಾನವನ್ನು ರದ್ದುಪಡಿಸಿ ಯಥಾಸ್ಥಿತಿಯಲ್ಲಿ ವಿಶ್ವವಿದ್ಯಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಲು ಒತ್ತಾಯಿಸಿ ಉಪಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಎಂ. ಲಮಾಣಿ ಅವರಿಗೆ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಮನವಿ ಸಲ್ಲಿಸಿ, ಯಾವುದೇ ಅನುದಾನ ಬರದಿರುವ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಗತ್ಯ ಅನುದಾನ ನೀಡಿ ಬಲಪಡಿಸುವ ಬದಲು ವಿಶ್ವವಿದ್ಯಾಲಯವನ್ನು ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ, ವಿವಿ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಹಾವೇರಿ ವಿವಿಯಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ನೂರಾರು ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ಈ ವಿವಿಗಳಿಗೆ ಸೇರ್ಪಡೆಯಾಗಿರುವ 42 ಪದವಿ ಕಾಲೇಜುಗಳು ಮತ್ತು‌ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ. ಈ ಹಿನ್ನೆಲೆ ಶಿಕ್ಷಣವನ್ನು ಕೇವಲ ಲಾಭದ ದೃಷ್ಟಿಯಲ್ಲಿ ಪರಿಗಣಿಸದೆ ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ಪರಿಗಣಿಸಿ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ‌ ವಿವಿಯನ್ನು ಉಳಿಸಿ, ಬೆಳೆಸಲು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಇರುವುದರಿಂದ ಜಿಲ್ಲೆಗೂ ಅನುಕೂಲ ಆಗುತ್ತದೆ. ಹಾವೇರಿ ವಿವಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ಹೋರಾಟ ಸಮಿತಿ ಸದಸ್ಯರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರಾದ ಪರಿಮಳ ಜೈನ, ಸತೀಶ ಕುಲಕರ್ಣಿ, ಸತೀಶ ಎಂ.ಬಿ., ಬಸವರಾಜ ಎಸ್., ಬಸವರಾಜ ಪೂಜಾರ, ಮಲ್ಲಿಕಾರ್ಜುನ ಹಿರೇಮಠ, ಬಸವರಾಜ ಹೆಡಿಗೊಂಡ, ಶ್ರೀಧರ ದೊಡಮನಿ ಇತರರು ಉಪಸ್ಥಿತರಿದ್ದರು.ಹಾವೇರಿ ವಿವಿ ಮುಚ್ಚುವ ನಿರ್ಧಾರ ಕೈಬಿಡಿ

ಹಾನಗಲ್ಲ: ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಬೇಕೆನ್ನುವ ಸಚಿವ ಸಂಪುಟದ ಉಪಸಮಿತಿಯ ತೀರ್ಮಾನ ರದ್ದುಪಡಿಸಿ ವಿಶ್ವವಿದ್ಯಾಲಯ ಉಳಿಸಿ, ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿ ಸದಸ್ಯರು ಶಾಸಕ ಶ್ರೀನಿವಾಸ ಮಾನೆ ಅವರನ್ನು ತಾಲೂಕಿನ ಅರೆಲಕ್ಮಾಪುರ ಗ್ರಾಮದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶಾಸಕ ಮಾನೆ, ವಿಶ್ವವಿದ್ಯಾಲಯದ ಬಗ್ಗೆ ತಮಗೂ ಅಭಿಮಾನ, ಕಾಳಜಿ ಇದ್ದು, ಉಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ವಿಶ್ವವಿದ್ಯಾಲಯ ಉಳಿಯಬೇಕು ಎನ್ನುವುದು ತಮ್ಮ ಭಾವನೆಯೂ ಆಗಿದೆ. ಹಿಂದಿನ ಸರ್ಕಾರ ಬರೀ ಉದ್ಘಾಟನೆ ಮಾಡಿ ಕೈತೊಳೆದುಕೊಂಡಿದೆ.ಅಗತ್ಯ ಸೌಲಭ್ಯ ಒದಗಿಸಲಿಲ್ಲ, ಸಿಬ್ಬಂದಿ ಸಹ ನೇಮಕ ಮಾಡಲಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯಯುತ ಅನುದಾನ ನೀಡದೇ ಅನ್ಯಾಯ ಮಾಡುತ್ತಿದೆ. ಪ್ರತಿವರ್ಷ ನಮ್ಮ ರಾಜ್ಯದಿಂದ ₹4.50 ಲಕ್ಷ ಕೋಟಿ ಆದಾಯ ಸಂಗ್ರಹಿಸಿ, ಇದಕ್ಕೆ ಪ್ರತಿಯಾಗಿ ಶೇ. 25ರಷ್ಟನ್ನೂ ನಮಗೆ ವಾಪಸ್ ನೀಡುತ್ತಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಬರಗಾಲ ಪರಿಹಾರವನ್ನೂ ನ್ಯಾಯಾಲಯದ ಮೊರೆ ಹೋಗಿ ಪಡೆಯುವಂಥ ಸ್ಥಿತಿ ಇದೆ. ಹಾಗಾಗಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮೇಲೆ ನೀವೂ ಒತ್ತಡ ಹಾಕಿ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸುವಂತೆ ಮನವಿ ಮಾಡಿ ಎಂದರು.

ಹೋರಾಟ ಸಮಿತಿಯ ಸದಸ್ಯರಾದ ಬಸವರಾಜ ಪೂಜಾರ, ಸತೀಶ ಕುಲಕರ್ಣಿ, ಪರಿಮಳಾ ಜೈನ, ಸತೀಶ ಎಂ.ಬಿ., ರೇಣುಕಾ ಗುಡಿಮನಿ, ಜುಬೇದಾ ನಾಯಕ, ಬಸವರಾಜ ಎಸ್., ಉಡುಚಪ್ಪ ಮಾಳಗಿ, ಎಂ. ಆಂಜನೇಯ ಉಪಸ್ಥಿತರಿದ್ದರು.