ವಿಶೇಷ ಚೇತನ ಮಕ್ಕಳಿಗೆ ಆವಶ್ಯಕವಾದಂತಹ ಸವಲತ್ತುಗಳನ್ನು ಸರಕಾರದಿಂದ ಒದಗಿಸಿಕೊಡಲು ಪ್ರಯತ್ನ ಮಾಡಲಾಗುವುದು ಹಾಗೂ ಪುತ್ತೂರಿನಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಚೇತನರಲ್ಲಿ ಅಗತ್ಯವುಳ್ಳವರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು: ವಿಶೇಷ ಚೇತನ ಮಕ್ಕಳಿಗೆ ಆವಶ್ಯಕವಾದಂತಹ ಸವಲತ್ತುಗಳನ್ನು ಸರಕಾರದಿಂದ ಒದಗಿಸಿಕೊಡಲು ಪ್ರಯತ್ನ ಮಾಡಲಾಗುವುದು ಹಾಗೂ ಪುತ್ತೂರಿನಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಚೇತನರಲ್ಲಿ ಅಗತ್ಯವುಳ್ಳವರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಯವ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಆಶ್ರಯದಲ್ಲಿ ಶುಕ್ರವಾರ ನೆಲ್ಲಿಕಟ್ಟೆಯಲ್ಲಿ ವಿಶೇಷ ಅಗತ್ಯ ಉಳ್ಳ ಮಕ್ಕಳಿಗೆ ಸಾಧನ, ಸಲಕರಣೆಗಳ ವಿತರಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಮಾತನಾಡಿ, ಒಂದರಿಂದ ಹತ್ತನೇ ತರಗತಿ ವರೆಗೆ ದಾಖಲಾಗಿರುವ ವಿಶೇಷ ಚೇತನ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ೫೨ ಮಂದಿಗೆ ಟಿಎಲ್‌ಎಮ್ ಕಿಟ್, ೨೦ಮಂದಿಗೆ ವ್ಹೀಲ್ ಚೆಯರ್, ೧೯ ಮಂದಿದೆ ರೊಲ್ಟರ್, ದೃಷ್ಠಿದೋಷವಿರುವ ಇಬ್ಬರಿಗೆ ಯುನಿವರ್ಸಲ್ ಬ್ರೈಲ್ ಹಾಗೂ ಶ್ರವಣ ದೋಷವಿರುವ ೯ ಮಂದಿಗೆ ಶ್ರವಣ ಸಾಧನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಎ.ಆರ್ ಕ್ಯಾಸ್ಟಲಿನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಬಿಆರ್‌ಪಿ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.