ಸಾರಾಂಶ
ಬಾಗಲಕೋಟೆಯ ನಗರದ ಮೆಳ್ಳಿಗೇರಿ ವಾಣಿಜ್ಯ ಮಳಿಗೆ ಬಳಿ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ ನಂ.57ರ ಬಾಗಲಕೋಟೆ-ನೀರಲಕೇರಿ ಮಾರ್ಗದ 7.73 ಕಿ.ಮೀ ಹೆದ್ದಾರಿಯನ್ನು ₹ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎಚ್.ವೈ. ಮೇಟಿ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂಬುದು ನನ್ನ ಹಲವು ವರ್ಷಗಳ ಕನಸು. ಅದು ಇದೀಗ ಈಡೇರುವ ಕಾಲ ಬಂದಿದೆ. ಶೀಘ್ರವೇ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ಬಿಟಿಡಿಎ ಅಧ್ಯಕ್ಷರೂ ಆದ ಶಾಸಕ ಎಚ್.ವೈ. ಮೇಟಿ ಹೇಳಿದರು.ನಗರದ ಮೆಳ್ಳಿಗೇರಿ ವಾಣಿಜ್ಯ ಮಳಿಗೆ ಬಳಿ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿ ನಂ.57ರ ಬಾಗಲಕೋಟೆ-ನೀರಲಕೇರಿ ಮಾರ್ಗದ 7.73 ಕಿ.ಮೀ ಹೆದ್ದಾರಿಯನ್ನು ₹ 20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಾರ್ಷಿಕ ₹200 ಕೋಟಿ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸರ್ಕಾರ ಸೂಚಿಸಿದೆ. ಶೀಘ್ರ ವಿಶೇಷ ಅಧಿಕಾರಿ ಕೂಡ ನೇಮಕಗೊಳ್ಳಲಿದ್ದಾರೆ. ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜೀವ ಗಾಂಧಿ ಆರೋಗ್ಯ ವಿವಿಯಿಂದ ಪ್ರತಿವರ್ಷ ₹200 ಕೋಟಿ ಅನುದಾನ ದೊರೆಯಲಿದೆ. ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದು ಶಾಸಕ ಮೇಟಿ ಅವರು, ಕಾಲೇಜು ಸ್ಥಾಪನೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುವುದು. ಅಗತ್ಯ ಜಾಗ ನೀಡಲು, ಸರ್ಕಾರ ಕೃಷ್ಣಾ ಭಾಗ್ಯ ಜಲ ನಿಗಮಕ್ಕೂ ನಿರ್ದೇಶನ ನೀಡಿದೆ. ಈ ಕುರಿತು ಬಿಟಿಡಿಎ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಒಂದೇ ಕಡೆ ವಾಣಿಜ್ಯ ಸಂಕೀರ್ಣ :
ಮುಳುಗಡೆಯಿಂದ ಬಾಗಲಕೋಟೆಯ ವ್ಯಾಪಾರ-ವಹಿವಾಟು ಛಿದ್ರಗೊಂಡಿದೆ. ವ್ಯಾಪಾರಸ್ಥರು, ಸೂಕ್ತ ವ್ಯಾಪಾರವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಒಂದೇ ಜಾಗದಲ್ಲಿ ಎಲ್ಲ ರೀತಿಯ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕಿದೆ. ಇದಕ್ಕಾಗಿ ಯುನಿಟ್-3ರಲ್ಲಿ ಸುಮಾರು 200 ಎಕರೆ ಜಾಗೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ. ಯುನಿಟ್-3ರಲ್ಲಿ ಗೃಹಬಳಕೆ ನಿವೇಶನಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದರು.ಬಾಗಲಕೋಟೆ-ನೀರಲಕೇರಿ ಮಾರ್ಗದ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ₹20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು, ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದ ಸೂಚಿಸಿದರು.
ಸಂತ್ರಸ್ತರ ಸಮಸ್ಯೆಗೆ ಮುಕ್ತಿ ಸಿಗಲಿ :ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಹಳ ದಿನಗಳ ಬಳಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಾಸಕರು, ನಮ್ಮ ಕ್ಷೇತ್ರಕ್ಕೆ ದೊರೆತಿರುವುದು ನಮ್ಮ ಸೌಭಾಗ್ಯ. ಶಾಸಕ ಮೇಟಿ ಅವರು, ಕ್ಷೇತ್ರದ ಪ್ರಮುಖ ಕೆಲಸಗಳನ್ನು ತಾವು ಹಾಗೂ ಮುಖಂಡ ಹೊಳಬಸು ಶೆಟ್ಟರ ಮೂಲಕ ಮಾಡಿಸುತ್ತಿರುವುದು ಸುತ್ತಾರ್ಯ ಎಂದರು.ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗಬೇಕು. ಪ್ರತಿವರ್ಷವೂ ಭೂಸ್ವಾಧೀನ ಪರಿಹಾರಧನ ಹೆಚ್ಚುತ್ತಿದ್ದು, ಇದು ಸರ್ಕಾರಕ್ಕೂ ಹೊರೆಯಾಗಲಿದೆ. ಏಕಕಾಲಕ್ಕೆ ಭೂಸ್ವಾಧೀನ ಪೂರ್ಣಗೊಳಿಸಬೇಕು. ಸಂತ್ರಸ್ತರು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದು, ಕಿಲ್ಲಾ ನಡುಗಡ್ಡೆ ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿದರು.ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಮೇಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಗಾಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕ ಬೇನೂರ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್. ರಾಂಪುರ, ಗ್ರಾಮೀಣ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಕಮತಗಿ, ಗುತ್ತಿಗೆದಾರ ಚಂದ್ರಕಾಂತ ನಾಗರಗೋಜಿ (ಐನಾಪುರ), ಅನಂತ ಅರಕಸಾಲಿ ಮುಖಂಡರಾದ, ರಾಜು ಮನ್ನಿಕೇರಿ, ಹನುಮಂತ ರಾಕುಂಪಿ, ಚಂದ್ರಶೇಖರ ರಾಠೋಡ, ಶ್ರೀನಿವಾಸ ಬಳ್ಳಾರಿ, ವೀರಣ್ಣ ಹುಂಡೇಕಾರ, ಸಿದ್ದಣ್ಣ ಗೋಡಿ, ವಿಜಯ ಕಮತಗಿ, ಮಲ್ಲು ಶಿರೂರ, ಅಂದಾನೆಪ್ಪ ಬ್ಯಾಡಗಿಶೆಟ್ಟರ, ಮಲ್ಲಪ್ಪ ಹಾಲವರ, ರಾಜು ಲಮಾಣಿ, ಶಂಕರ ತಪಶೆಟ್ಟಿ, ಬಾಗಲವಾಡ ಮಂಜುಳಾ ಭುಸಾರ, ಶ್ರೀನಿವಾಸ ಬಳ್ಳಾರಿ, ತಿಪ್ಪಣ್ಣ ನೀಲನಾಯಕ, ಶಂಕರ ನಾಯಕ, ಬಾಲು ಚವ್ಹಾಣ, ವಿಜಯ ಮುಳ್ಳೂರ, ಅಕ್ಬರ್ ಮುಲ್ಲಾ, ಅಲ್ತಾಫ್ ಯಾದವಾಡ, ಅಮಿನಸಾಬ್ ನದಾಫ್, ಶ್ರೀಧರ ನೀಲನಾಯಕ, ಶ್ರವಣ ಖಾತೆದಾರ, ರೇಣುಕಾ ನಾರಾಯಣಕರ, ಗಂಗೂಬಾಯಿ ಚವ್ಹಾಣ ಇತರರು ಪಾಲ್ಗೊಂಡಿದ್ದರು.