ಯೋಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು

| Published : Jun 21 2024, 01:02 AM IST

ಯೋಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರದ ಕೆಆರ್‌ಎಸ್‌ ರಸ್ತೆಯ ಬೃಂದಾವನ ಬಡಾವಣೆಯಲ್ಲಿ ಎಂಟು ಎಕರೆ ಜಾಗದಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆಯು ಯೋಗ ಕ್ಷೇತ್ರಕ್ಕೆ ತನ್ನದೇ ಆದ ಅನುಪಮ ಕೊಡುಗೆ ನೀಡುತ್ತಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಉನ್ನತ ಶಿಕ್ಷಣ ಹಾಗೂ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ಹಾಗೂ ಯೋಗಗಳ ಮುಖಾಂತರ ಚಿಕಿತ್ಸೆ ನೀಡುತ್ತಿರುವ ಏಕೈಕ ಸರ್ಕಾರಿ ಪದವಿ ಶೈಕ್ಷಣಿಕ ಸಂಸ್ಥೆ ಇದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೆಆರ್‌ಎಸ್‌ ರಸ್ತೆಯ ಬೃಂದಾವನ ಬಡಾವಣೆಯಲ್ಲಿ ಎಂಟು ಎಕರೆ ಜಾಗದಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಆಸ್ಪತ್ರೆಯು ಯೋಗ ಕ್ಷೇತ್ರಕ್ಕೆ ತನ್ನದೇ ಆದ ಅನುಪಮ ಕೊಡುಗೆ ನೀಡುತ್ತಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಉನ್ನತ ಶಿಕ್ಷಣ ಹಾಗೂ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ಹಾಗೂ ಯೋಗಗಳ ಮುಖಾಂತರ ಚಿಕಿತ್ಸೆ ನೀಡುತ್ತಿರುವ ಏಕೈಕ ಸರ್ಕಾರಿ ಪದವಿ ಶೈಕ್ಷಣಿಕ ಸಂಸ್ಥೆ ಇದಾಗಿದೆ.

ಯೋಗವು 5000ಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಜ್ಞಾನ ಭಂಡಾರವಾಗಿದೆ. ಭಾರತೀಯ ಸಂಸ್ಕೃತಿಯ ಅದ್ಭುತ ಕೊಡುಗೆಗಳಲ್ಲಿ ಯೋಗವೂ ಒಂದು. ಸಾಮಾನ್ಯವಾಗಿ ಯೋಗ ಎಂದರೆ ತಿರುಗುವ, ಬಾಗುವ, ಚಾಚುವ ಮತ್ತು ಉಸಿರಾಟದ ವ್ಯಾಯಾಮವೆಂದು ಜನರು ತಿಳಿದಿದ್ದಾರೆ. ಆದರೆ ಇವೆಲ್ಲ ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಯೋಗ ಎಂದರೆ ವ್ಯಕ್ತಿಯ ಶಾರೀರಿಕ, ಶಕ್ತಿಯನ್ನು ಮತ್ತು ಮಾನಸಿಕ ಅಂತಃಸತ್ವವನ್ನು ಮತ್ತು ಆಧ್ಯಾತ್ಮಿಕ ತೇಜಸ್ಸನ್ನು ಹೆಚ್ಚಿಸುವ ಒಂದು ವಿಜ್ಞಾನ. ಈ ಯೋಗ ಶಾಸ್ತ್ರವನ್ನು ಋಷಿಮುನಿಗಳು ಆಧ್ಯಾತ್ಮ ಸಾಧನೆಗೆ ಬಳಸುತ್ತಿದ್ದು, ಆಧುನಿಕ ಯುಗದಲ್ಲಿ ಆರೋಗ್ಯ ಸಾಧನೆ, ರೋಗ ನಿರ್ಮೂಲನೆಗೆ, ದೈಹಿಕ, ಮಾನಸಿಕ, ಭಾವನಾತ್ಮಕ ಸಾಮಾಜಿಕ ಆಧ್ಯಾತ್ಮಿಕ ಹಂತಗಳಲ್ಲಿ ಸಮತೋಲನೆ ಹಾಗೂ ಸ್ವಸ್ಥ ಜೀವನ ನಡೆಸಲು ಯೋಗ ಪ್ರಮುಖ ಸ್ಥಾನವನ್ನು ಪಡೆದಿದೆ.

ಯೋಗದ ವಿವಿಧ ಆಸನ, ಪ್ರಾಣಾಯಾಮ, ಮುದ್ರಾ, ಧ್ಯಾನಗಳಿಂದ ಮನುಷ್ಯರಲ್ಲಿ ಉದ್ಭವವಾಗಿರುವ ಮಾನಸಿಕ ಕ್ಲೇಶ ಹಾಗೂ ಇದರಿಂದ ಉಂಟಾಗುವ ಮನೋದೈಹಿಕ ವ್ಯಾಧಿಗಳ ನಿವಾರಣೆಯನ್ನು ದೂರಗೊಳಿಸಿ ಸುಖಜೀವನ ನಡೆಸಲು ಯೋಗವು ಅತ್ಯಂತ ಅವಶ್ಯಕ.

ಪ್ರಕೃತಿ ಚಿಕಿತ್ಸೆ:

ಪ್ರಕೃತಿ ಚಿಕಿತ್ಸಾ ವಿಧಾನಗಳು ಚಿಕಿತ್ಸೆ ಎನ್ನುವುದಕ್ಕಿತ ‘ಜೀವನ ಶೈಲಿ’ಯನ್ನು ವಿವರಿಸುವ ವಿಜ್ಞಾನ ಎನ್ನಬಹುದು. ಮನುಷ್ಯನ ಆರೋಗ್ಯವನ್ನು ಕಾಪಾಡಲು ಹಾಗೂ ವೃದ್ಧಿಸಲು ಪ್ರಕೃತಿಯೇ ಒದಗಿಸುವ ನೀರು, ಗಾಳಿ, ಮಣ್ಣು, ಅಗ್ನಿ, ಆಕಾಶಗಳಿಂದ ಒಳಪಟ್ಟ ಚಿಕಿತ್ಸಾ ಕ್ರಮಗಳನ್ನು ಉಪಯೋಗಿಸುವುದೇ ಪ್ರಕೃತಿ ಚಿಕಿತ್ಸೆ. ಇದು ಒಂದು ಔಷಧಿ ರಹಿತ ಚಿಕಿತ್ಸೆ

ಪದ್ಧತಿಯಾಗಿದ್ದು, ಪಂಚಮಹಾಭೂತಗಳಿಂದ ನಿರ್ಮಾಣವಾದ ದೇಹಕ್ಕೆ ಪಂಚಮಹಾಭೂತಗಳಿಂದಲೇ ನೀಡುವ ಚಿಕಿತ್ಸೆ.

ಈ ಎಲ್ಲಾ ಚಿಕಿತ್ಸಾ ವಿಧಾನಗಳು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ.

ಪ್ರಸ್ತುತ ವಿದ್ಯಮಾನದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದ್ಧತಿಗಳ ಬಗ್ಗೆ ಜನರಲ್ಲಿ ಅರಿವು ಮತ್ತು ನಂಬಿಕೆ ಹೆಚ್ಚಾಗುತ್ತಿದೆ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯು ಒಬ್ಬ ವ್ಯಕ್ತಿಯನ್ನು ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಸಹಾಯ ಮಾಡುತ್ತದೆ. ಪ್ರಕೃತಿ ಚಿಕಿತ್ಸೆಯ ಅಡಿಪಾಯವು ಆರೋಗ್ಯಕರ ಆಹಾರ, ಶುದ್ಧನೀರು, ಸೂರ್ಯನ ಬೆಳಕು, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಪ್ರಾಮುಖ್ಯತೆಯನ್ನು ಆಧರಿಸಿದೆ.

ಲಭ್ಯವಿರುವ ಚಿಕಿತ್ಸೆಗಳು:

ಸುರುಳಿ ಸ್ನಾನ, ಒಣಹವೆ ಸ್ನಾನ, ಹಬೆಯ ಸ್ನಾನ, ಕಟಿ ಸ್ನಾನ, ಸರ್ವಾಂಗ ಸ್ಪಂದನ ಚಿಕಿತ್ಸೆ, ಬೆನ್ನು ಹುರಿ ಸ್ನಾನ. ಜಲಕಂಪನ ಚಿಕಿತ್ಸೆ, ಹಸ್ತಸ್ನಾನ, ಪಾದಸ್ನಾನ, ಎನಿಮಾ,ಸೂಜಿ ಚಿಕಿತ್ಸೆ. ಉಪವಾಸ ಮತ್ತು ಪಥ್ಯಾಹಾರ ಚಿಕಿತ್ಸೆ. ಫಿಸಿಯೋಥೆರಪಿ:

ಮಣ್ಣಿನ ಚಿಕಿತ್ಸೆ ಮತ್ತು ಸೂರ್ಯಸ್ನಾನ, ಬಣ್ಣಗಳ ಚಿಕಿತ್ಸೆ ಮತ್ತು ಮ್ಯಾಗ್ನೆಟ್ ಥೆರಪಿ, ಯೋಗ ಚಿಕಿತ್ಸೆ

ಈ ಚಿಕಿತ್ಸಾ ಪದ್ಧತಿಗಳಿಂದ ದೀರ್ಘಾವಧಿ ಕಾಯಿಲೆಗಳಾದಂತಹ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯ,ಸಂಧಿವಾತ, ಥೈರಾಯ್‌ಡ್‌, ಮೂಲವ್ಯಾಧಿ, ಪಾರ್ಶ್ವವಾಯು, ಇತ್ಯಾದಿ ಸಮಸ್ಯೆೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು. ಚಿಕಿತ್ಸೆ ಕೋರಿ ಬರುವವರ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತಿದೆ.

ಕಾಲೇಜು:

1983-84ನೇ ಸಾಲಿನಿಂದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರಿನಲ್ಲಿ ಆಯುರ್ವೇದ ಪದವೀಧರರಿಗೆ ಎರಡು ವರ್ಷಗಳ ಡಿಎನ್‌ವೈ ಕೋರ್ಸ್‌ ತೆರೆಯಲಾಯಿತು, ನಂತರ 1998-99 ರಲ್ಲಿ ರಾಜ್ಯ ಸರ್ಕಾರವು ಡಿಪ್ಲೋಮಾ ಕೋರ್ಸ್‌ನ್ನು ಉನ್ನತಿಗೊಳಿಸಿ ಪೂರ್ಣ ಪ್ರಮಾಣದಲ್ಲಿ 5 ವರ್ಷಗಳ ಬಿ.ಎನ್.ವೈ.ಎಸ್ (1 ವರ್ಷ ಕಲಿಕಾ ವೈದ್ಯ ತರಬೇತಿ ಸೇರಿ) ಪದವಿ ಶಿಕ್ಷಣವನ್ನು ವಿದ್ಯಾರ್ಥಿಗಳ ಪ್ರವೇಶ ಸಂಖೈ 25ಕ್ಕೆ ನಿಗದಿಪಡಿಸಿ ಮಂಜೂರಾತಿ ನೀಡಿತು.

ಈ ಮಹಾವಿದ್ಯಾಲಯವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತಗೊಂಡಿದೆ. 2006-07ನೇ ಸಾಲಿನಿಂದ ಸಕ್ರಿಯವಾಗಿ ಕೇವಲ 5 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಆರಂಭಗೊಂಡ ಈ ಮಹಾವಿದ್ಯಾಲಯವು ಪ್ರಸ್ತುತ 56 ವಿದ್ಯಾರ್ಥಿಗಳ ಪ್ರವೇಶದ ಏರಿಕೆಯನ್ನು ಕಂಡಿದೆ. ಈ ಮಹಾವಿದ್ಯಾಲಯವು ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯವಾಗಿದೆ.

60 ವಿದ್ಯಾರ್ಥಿಗಳ ಪ್ರವೇಶಮಿತಿಯನ್ನು ಹೊಂದಿದ್ದು ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವಿಧಾನಗಳ ಬಗ್ಗೆ ನುರಿತ ಪ್ರಾಧ್ಯಾಪಕರುಗಳಿಂದ ಪಾಠ ಪ್ರವಚನ ಹಾಗೂ ಪ್ರತ್ಯಾಕ್ಷಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗಾಗಿ ಡಿಜಿಟಲ್ ಪ್ರಯೋಗಾಲಯ, ಹಾಗೂ ಮೈಸೂರಿನ ಜಯದೇವ ಆಸ್ಪತ್ರೆ, ಪಿ.ಕೆ.ಟಿ.ಬಿ ಆಸ್ಪತ್ರೆಗಳಿಗೆ ಪ್ರಾತ್ಯಕ್ಷಿಕೆಗಾಗಿ ಕಳುಹಿಸಲಾಗುತ್ತಿದೆ. ಪ್ರತಿ ವರ್ಷವು ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಕೋರ್ಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ವಿವಿಧ ಕಾರ್ಯಕ್ರಮಗಳು:

ಯೋಗ ಗ್ರಾಮ ಕಾರ್ಯಕ್ರಮ, ಆರೋಗ್ಯ ಸಮೀಕ್ಷೆ, ಮನೆ ಮದ್ದು ಕಾರ್ಯಕ್ರಮ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಆರೋಗ್ಯ ಶಿಬಿರ, ಯೋಗ ದಸರಾ, ‘ಪೋಷಣಾ ಅಭಿಯಾನ’’ ಅಡಿಯಲ್ಲಿ ವಿವಿಧ ಅಂಗನವಾಡಿ, ಶಾಲೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವೈದ್ಯರಿಂದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಹಾರ ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ನ್ಯಾಚರೋಪತಿ ದಿನಾಚರಣೆ, ಪರಿಸರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ರಾಷ್ಟೀಯ ಮಟ್ಟದ ಯೋಗಾಸನ ಸ್ಪರ್ಧೆ, ವಿಶ್ವವಿದ್ಯಾಲಯದ ಯೋಗಾಸನ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ, ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿದಂತಹ ಅತಿಥಿ ಉಪನ್ಯಾಸಕರಿಂದ ತರಗತಿ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಬಂಧಿಸಿದಂತೆ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಪದ್ಧತಿಗಳಾದಂತಹ ಫಿಸಿಯೋಥೆರಪಿ, ಹೈಡ್ರೋಥೆರಪಿ, ಯೋಗ ಥೆರಪಿ, ಮಡ್ ಥೆರಪಿ, ಅಕ್ಯೂಪಂಚರ್, ಮಸಾಜ್ ಥೆರಪಿ ಹಾಗೂ ಪಥ್ಯಾಹಾರ ಥೆರಪಿ ಚಿಕಿತ್ಸೆಗಳನ್ನು ಒಳಗೊಂಡ ಸುಮಾರು 30 ಚಿಕಿತ್ಸಾ ವಿಧಾನ ಕ್ರಮಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಅಲ್ಲದೇ, ಪ್ರತಿದಿನವು ಸುಮಾರು 50 ರಷ್ಟು ಒಳರೋಗಿಗಳು ಹಾಗೂ ಸುಮಾರು 100 ರಷ್ಟು ಹೊರರೋಗಿಗಳು ನಿತ್ಯವೂ ಈ ಚಿಕಿತ್ಸೆಯನ್ನು ಉಚಿತವಾಗಿ ಪಡೆದು ಗುಣಮುಖರಾಗಿರುತ್ತಾರೆ.

-ಡಾ.ಗಜಾನನ ಹೆಗಡೆ, ಪ್ರಾಂಶುಪಾಲರು, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ