ಕನ್ನಡಪ್ರಭ ವಾರ್ತೆ ನಾಗಮಂಗಲ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ನಾಡಿನ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಸವಲತ್ತುಗಳನ್ನು ನೀಡಲಾಗುತ್ತಿದೆ. ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ತಿರುಗನಹಳ್ಳಿಯಲ್ಲಿ ಕೃಷಿ ಇಲಾಖೆಯ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮದ 65 ಮಂದಿ ಅರ್ಹ ಫಲಾನುಭವಿ ರೈತರಿಗೆ ರಿಯಾಯ್ತಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿ ಮಾತನಾಡಿದ ಸಚಿವರು, ಸರ್ಕಾರ ಕೇವಲ 5 ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗಿಲ್ಲ. ನಾಡಿನ ರೈತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನಸಾಮಾನ್ಯರ ಶ್ರೇಯೋಭೀವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಕೃಷಿ ಇಲಾಖೆಯಲ್ಲಿ ಪ್ರತಿ ವರ್ಷ ರೈತರ ಹಿತ ಕಾಯಲು ಯೋಜನೆಗಳನ್ನು ಹೆಚ್ಚಿಸಿ ಗರಿಷ್ಠ ಪ್ರಮಾಣದಲ್ಲಿ ಸವಲತ್ತುಗಳನ್ನು ಪೂರೈಸಲಾಗುತ್ತಿದೆ. ಕಳೆದ ಮೂರು ವರ್ಷದಿಂದ ತಾಲೂಕಿನ ಅರ್ಹ ಫಲಾನುಭವಿ ರೈತರಿಗೆ 3.10 ಕೋಟಿ ರು. ವೆಚ್ಚದ 668 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ ಎಂದರು.ಕಳೆದ 2018 ರಿಂದ 5 ವರ್ಷ ಕಾಲ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಇಲಾಖೆಯ ಕೃಷಿ ಹೊಂಡ ಯೋಜನೆಯನ್ನೇ ಸ್ಥಗಿತಗೊಳಿಸಿದ್ದರು. ನಾನು ಕೃಷಿ ಸಚಿವನಾದ ನಂತರ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಕೃಷಿ ಹೊಂಡ ಯೋಜನೆಗೆ ಚಾಲನೆ ಕೊಟ್ಟು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ಮೂರು ವರ್ಷದಲ್ಲಿ ತಾಲೂಕಿನ 30ಮಂದಿ ರೈತರಿಗೆ ಕೃಷಿ ಹೊಂಡ ಯೋಜನೆಯ ಸಬ್ಸಿಡಿ ಹಣ ನೀಡಲಾಗಿದೆ ಎಂದರು.
ಬೆಳೆ ವಿಮೆ ಮಾಡಿಸಿರುವ ರಾಜ್ಯದ 28 ಲಕ್ಷ ರೈತರ ಬ್ಯಾಂಕ್ ಉಳಿತಾಯ ಖಾತೆಗೆ 6 ಸಾವಿರ ಕೋಟಿ ರು. ಹಣ ಪಾವತಿಯಾಗಿದೆ. ರೈತರು ಇಲಾಖೆಯಲ್ಲಿ ದೊರಕುವ ರಿಯಾಯ್ತಿ ದರದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಶೇ.90ರ ಸಬ್ಸಿಡಿಯಲ್ಲಿ ತುಂತುರು ನೀರಾವರಿ, ಟಾರ್ಪಲ್ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಪಡೆದುಕೊಂಡುಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಈ ವೇಳೆ ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದ ಆರ್.ಕೃಷ್ಣೇಗೌಡ, ನಾಗಣ್ಣ, ಪರಮೇಶ್, ದೇವರಾಜು, ಹಂದೇನಹಳ್ಳಿ ಮಹದೇವ, ರಘು ಸೇರಿದಂತೆ ಹಲವರು ಇದ್ದರು.