ಸಾರಾಂಶ
ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪೋಷಕರ ಸಹಕಾರ ಅಗತ್ಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತೀರ್ಥಹಳ್ಳಿ : ಸರ್ಕಾರಿ ಶಾಲೆಯ ಶಿಕ್ಷಕರು ಶ್ರೇಷ್ಠ ದರ್ಜೆಯವರಾಗಿದ್ದು ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪೋಷಕರ ಸಹಕಾರ ಅಗತ್ಯವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೇಗುವಳ್ಳಿಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹೆದ್ದಾರಿ ಅಗಲೀಕರಣದಿಂದಾಗಿ ಸ್ಥಳಾಂತರಗೊಂಡಿರುವ ಬೇಗುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಮಂಜೂರಾದ ಎರಡು ಎಕರೆ ಜಾಗದ ಹಕ್ಕುಪತ್ರವನ್ನು ವಿತರಿಸಿ ಶಂಕುಸ್ಥಾಪನೆ ನೆರವೇರಿಸಿ, ಈ ಶಾಲೆಗೆ ಅಗತ್ಯವಿರುವ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಆದರೆ ಎಸ್‍ಡಿಎಂಸಿ ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಶಾಲೆಯ ಬೆಳವಣಿಗೆ ತೋರಿಸುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದರು.
13500 ಶಿಕ್ಷಕರ ನೇಮಕಕ್ಕೆ ಆದೇಶ ನೀಡಿದ್ದು ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯ ಶೇ 80% ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಯ ಶಿಕ್ಷಕರು ಶ್ರೇಷ್ಠ ದರ್ಜೆಯವರಾಗಿದ್ದು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಬದ್ಧತೆಯನ್ನೂ ಹೊಂದಿದವರಾಗಿದ್ದಾರೆ. ಅವರ ಮೇಲೆ ಹೊಣೆಗಾರಿಕೆಯೂ ಇದೆ. ಪೋಷಕರು ಮಕ್ಕಳನ್ನು ಜಾತ್ರೆ ಮದುವೆ ಮುಂಜಿ ನೆವದಲ್ಲಿ ಶಾಲೆಗೆ ರಜೆ ಮಾಡಿಸಬಾರದು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಪೆಷಲ್ ಕ್ಲಾಸ್ ಮುಂತಾದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಸರ್ಕಾರದ ಸಾಧನೆಯನ್ನು ಮೆಚ್ಚಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಮಕ್ಕಳಿಗೆ ಮೊಟ್ಟೆ ನೀಡುವ ಸಲುವಾಗಿ 1591 ಕೋಟಿ ರು. ಹಣವನ್ನು ನೀಡಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತಾಲೂಕಿನ ಆಗುಂಬೆ ಭಾಗದ ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ಶಾಲೆಯ ಹಳೆಯ ಕಟ್ಟಡಗಳು ಶಿಥಿಲಗೊಂಡಿದ್ದು ಶಾಲೆಯ ಮಹಡಿ ವಿದ್ಯಾರ್ಥಿಗಳ ತಲೆ ಮೇಲೆ ಬೀಳುವಂತಿದ್ದು ಇದರ ದುರಸ್ತಿ ಕಾರ್ಯಕ್ಕೆ ಆದ್ಯತೆ ನೀಡುವ ಅಗತ್ಯವಿದೆ. ಇಂದು ರಜತ ಮಹೋತ್ಸವ ನಡೆದ ಮರಗಳಲೆ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳು ಕಲಿಯುತ್ತಿದ್ದು ಶಾಲೆಯ ಮುಕ್ತಾಯ ಸಮಾರಂಭವೇ ಎಂಬ ಅನುಮಾನ ವ್ಯಕ್ತವಾಗುವಂತಿತ್ತು. ಇಂತಹ ಶಾಲೆಗಳ ಕಡೆಗೆ ಸರ್ಕಾರ ಗಮನ ಹರಿಸಬೇಕಿದೆ. ಕೋಳಿಮೊಟ್ಟೆ ಧಾರಣೆ ಹೆಚ್ಚಿದ್ದು ಇಲಾಖೆ ವತಿಯಿಂದ ನೀಡುತ್ತಿರುವ ಹಣವೂ ಸಾಲದೇ ಶಿಕ್ಷಕರು ಹೇಳಲಾರದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ತೂದೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಮಣ್ಯ, ಬಿಇಒ ವೈ.ಗಣೇಶ್, ತೂದೂರು ಗ್ರಾಪಂ ಸದಸ್ಯರು, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮುಂತಾದವರು ಇದ್ದರು.