ಸಾರಾಂಶ
ತುಮಕೂರು/ಬೆಳಗಾವಿ : ಹಾಲು, ಪೆಟ್ರೋಲ್ ದರ ಬಳಿಕ ಇದೀಗ ಕೆಎಸ್‌ಆರ್‌ಟಿಸಿ ಟಿಕೆಟ್ ದರ ಏರಿಕೆ ಬರೆಯೂ ಜನರ ಮೇಲೆ ಬೀಳುವ ಸಾಧ್ಯತೆ ಇದೆ. ಟಿಕೆಟ್ ದರವನ್ನು ಸುಮಾರು ಶೇ.10ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ.
ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಉಳಿಸಲು ದರ ಏರಿಕೆ ಅನಿವಾರ್ಯ. ಈ ಕುರಿತ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಹೇಳಿದ್ದಾರೆ.
295 ಕೋಟಿ ನಷ್ಟ:
ಬಸ್ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕೆಎಸ್ಆರ್‌ಟಿಸಿ ಸಂಸ್ಥೆ ಉಳಿಯಬೇಕಾದರೆ ದರ ಹೆಚ್ಚಳ ಅನಿವಾರ್ಯ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್‌ಆರ್‌ಟಿಸಿಗೆ ₹295 ಕೋಟಿ ನಷ್ಟವಾಗಿದೆ. ಅಲ್ಲದೆ 40 ಹೊಸ ವೋಲ್ವೋ ಬಸ್‌ಗಳಿಗಾಗಿಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
2019ರಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ತೈಲ ಬೆಲೆ ಏರಿಕೆಯಾಗಿರುವುದು ಮತ್ತು ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸವಲತ್ತು ಕೊಡಬೇಕಿರುವ ಈ ಪರಿಸ್ಥಿತಿಯಲ್ಲಿ ದರ ಹೆಚ್ಚಳ ಅನಿವಾರ್ಯ. 2020ರಲ್ಲಿಯೇ ಕೆಎಸ್ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಮಾಡಿಲ್ಲ. ಈ ಬಾರಿ ವೇತನ ಪರಿಷ್ಕರಣೆ ಮಾಡುತ್ತೇವೆ. ಹಾಗಾಗಿ ಟಿಕೆಟ್ ದರ ಹೆಚ್ಚಳ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ದರ ಹೆಚ್ಚಳದಿಂದ ಪುರುಷ ಪ್ರಯಾಣಿಕರಿಗೆ ಹೊರೆಯಾಗುತ್ತದೆ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಟಿಕೆಟ್ ದರ ಹೆಚ್ಚಳದಿಂದ ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಟಿಕೆಟ್ ದರ ಕೂಡ ಹೆಚ್ಚಾಗುತ್ತದೆ, ಸರ್ಕಾರ ಅದನ್ನು ತುಂಬಿಕೊಡಲಿದೆ ಎಂದು ಪ್ರತಿಪಾದಿಸಿದರು.
ಶಕ್ತಿ ಯೋಜನೆಯಿಂದ ನಷ್ಟ:
ಶಕ್ತಿ ಯೋಜನೆಯಿಂದ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಒಂದಾಗಿದ್ದು, ಇದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ಈ ಯೋಜನೆಯನ್ನು ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಲಾಭಕ್ಕೆ ಬರುವ ಪ್ರಯತ್ನ ನಡೆಯಲಿದೆ. ಇದರ ಜತೆಗೆ ಟಿಕೆಟ್ ದರ ಹೆಚ್ಚಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.