ಕೊಲೆಪಾತಕರಿಗೆ ಸರ್ಕಾರ ರಕ್ಷಣೆ

| Published : May 18 2024, 12:32 AM IST

ಸಾರಾಂಶ

ಅಂಜಲಿ ಹತ್ಯೆ ಯಾವುದೋ ಕಾಡಿನಲ್ಲಿ ಆಗಿಲ್ಲ, ಜನನಿಭಿಡ ಪ್ರದೇಶವಾಗಿರುವ ನಗರದಲ್ಲಿ. ಅದೂ ಜನಸಾಮಾನ್ಯರು ಇರುವಂತಹ ಪ್ರದೇಶದಲ್ಲಿ ನಡೆದಿದೆ.

ಹುಬ್ಬಳ್ಳಿ:

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬಳಿಕ ಅಂಜಲಿ ಹತ್ಯೆಯಾಗಿದ್ದು, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಕೊಲೆಪಾತಕರಿಗೆ ರಕ್ಷಣೆ ನೀಡುತ್ತಿರುವ ರಣಹೇಡಿ ಸರ್ಕಾರವಾಗಿದೆ ಎಂದು ವಿಪ ಸದಸ್ಯ ಎನ್. ರವಿಕುಮಾರ ಆರೋಪಿಸಿದರು.

ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಠಾಣೆ ಮುಚ್ಚಿಬಿಡಿ:

ಅಂಜಲಿ ಹತ್ಯೆ ಯಾವುದೋ ಕಾಡಿನಲ್ಲಿ ಆಗಿಲ್ಲ, ಜನನಿಭಿಡ ಪ್ರದೇಶವಾಗಿರುವ ನಗರದಲ್ಲಿ. ಅದೂ ಜನಸಾಮಾನ್ಯರು ಇರುವಂತಹ ಪ್ರದೇಶದಲ್ಲಿ ನಡೆದಿದೆ. ನೇಹಾ ಹತ್ಯೆಯಾಗಿ ಇನ್ನೂ ತಿಂಗಳು ಕಳೆದಿಲ್ಲ. ಅದೇ ರೀತಿಯಾಗಿ ಅಂಜಲಿ ಹತ್ಯೆಯಾಗಿದೆ. ಎರಡು ಘಟನೆಗಳಿಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕು. ಇಲ್ಲಿ ಪೊಲೀಸ್ ಠಾಣೆ ಇದ್ದು ಏನು ಉಪಯೋಗ, ಕೂಡಲೇ ಅದನ್ನು ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ರಾಜೀನಾಮೆ ನೀಡಲಿ:

ಬೆದರಿಕೆ ಕುರಿತು ಠಾಣೆಗೆ ಹೋಗಿ ದೂರು ಕೊಟ್ಟರೂ ಏನು ಮಾಡದೇ ಇರುವ ಪೊಲೀಸರು ಏಕೆ ಬೇಕು?. ಸಾವಿರಾರು ಜನ ಪೊಲೀಸರು ಇದ್ದರೂ ಏನು ಉಪಯೋಗ? ನಿಮಗೆ ಏಕೆ ಸಂಬಳ ಕೊಡಬೇಕು? ಎಂದು ಪ್ರಶ್ನಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾರಿಕೆ ಉತ್ತರ ನೀಡುವುದನ್ನು ಕೈಬಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.

₹50 ಲಕ್ಷ ಪರಿಹಾರ ನೀಡಿ:

ಈ ಕೂಡಲೇ ಸರ್ಕಾರ ಅಂಜಲಿ ಕುಟುಂಬಕ್ಕೆ ಒಂದು ಸರ್ಕಾರಿ ನೌಕರಿ ಕೊಡಬೇಕು, ಸ್ವಂತ ಮನೆ ಮಂಜೂರು ಮಾಡಬೇಕು, ಮನೆ ನಡೆಸಲು ₹ 50 ಲಕ್ಷ ಪರಿಹಾರ ನೀಡಬೇಕು. ನೇಹಾ ಕುಟುಂಬಕ್ಕೂ 24 ಗಂಟೆಯೊಳಗಾಗಿ ಸೂಕ್ತ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ರವಿಕುಮಾರ ಎಚ್ಚರಿಕೆ ನೀಡಿದರು.

ಆರೋಪಿ ಗಿರೀಶ ಸಾವಂತನನ್ನು ಈಗಾಗಲೇ ಬಂಧಿಸಲಾಗಿದೆ. ಕೂಡಲೇ ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಎಲ್ಲಿಗೆ ಹೋಗಿದ್ದಾರೆ?. ಉದ್ದುದ್ದ ಭಾಷಣ ಮಾಡುವ ಅವರು ಅಂಜಲಿ ನಿವಾಸಕ್ಕೆ ಬಂದು ಸಾಂತ್ವನ ಹೇಳುವ ಕಾರ್ಯ ಏಕೆ ಮಾಡುತ್ತಿಲ್ಲ. ಈಗಲಾದರೂ ಎಚ್ಚೆತ್ತು ಅನ್ಯಾಯಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸಚಿವರು, ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ಒತ್ತಾಯಿಸಿದರು.