ಡ್ರಗ್‌ ಪೆಡ್ಲರ್‌ಗಳಿಗೆ ಸರ್ಕಾರ ರಕ್ಷಣೆ: ಪಿ. ರಾಜೀವ್‌

| Published : Jul 17 2025, 12:30 AM IST

ಸಾರಾಂಶ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಡ್ರಗ್ಸ್‌ ವಿರುದ್ಧ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಿ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲಾಗಿತ್ತು. ಆದರೆ, ಇಂದಿನ ಸರ್ಕಾರ ಅವರ ರಕ್ಷಣೆ ಮಾಡುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾಗಿರುವ ಲಿಂಗರಾಜ್ ಅವರನ್ನು ಗಾಂಜಾ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಗಂಗಾವತಿ:

ರಾಜ್ಯ ಕಾಂಗ್ರೆಸ್‌ ಸರ್ಕಾರ ಡ್ರಗ್‌ ಪೆಡ್ಲರ್‌ಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದ್ದಾರೆ.

ತಾಲೂಕಿನ ಮರಳಿ ಗ್ರಾಮದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗ ಮಟ್ಟದ ಪ್ರಮುಖರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಡ್ರಗ್ಸ್‌ ವಿರುದ್ಧ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸಿ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲಾಗಿತ್ತು. ಆದರೆ, ಇಂದಿನ ಸರ್ಕಾರ ಅವರ ರಕ್ಷಣೆ ಮಾಡುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾಗಿರುವ ಲಿಂಗರಾಜ್ ಅವರನ್ನು ಗಾಂಜಾ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಆದರೆ, ರಾಜ್ಯದ ಪೊಲೀಸ್‍ರು ಈ ವಿಚಾರದಲ್ಲಿ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.

ಲಿಂಗರಾಜ್‌ ಬಂಧನ ಉದಾಹರಣೆ ಅಷ್ಟೇ. ಇಂತಹ ಸಾಕಷ್ಟು ಡ್ರಗ್‌ ಪೆಡ್ಲರ್‌ಗಳು ರಾಜ್ಯದಲ್ಲಿದ್ದು ಅವರನ್ನು ಸಚಿವ ಪ್ರಿಯಾಂಕ ಖರ್ಗೆ ರಕ್ಷಿಸುತ್ತಿದ್ದಾರೆ. ಗೃಹ ಇಲಾಖೆ ಮೌನವಾಗಿದ್ದು ರಾಜ್ಯದಲ್ಲಿ ಡ್ರಗ್‌ ಜಾಲ ಹೆಮ್ಮರವಾಗಿ ಬೆಳೆಯುತ್ತಿದೆ. ಅದರ ವಿರುದ್ಧ ಅಭಿಯಾನ ನಡೆಸುವುದನ್ನು ಬಿಟ್ಟು ಗೃಹ ಇಲಾಖೆ ಅಂತಹವರ ರಕ್ಷಣೆಗೆ ಮುಂದಾಗಿದೆ. ಅಭಿಯಾನ ನಡೆಸುವಂತೆ ಸಾಕಷ್ಟು ಬಾರಿ ಗೃಹ ಇಲಾಖೆಗೆ ಹೇಳಿದರೂ ಸ್ಪಂದಿಸಿಲ್ಲ ಎಂದು ದೂರಿದ ಅವರು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯ ಉಗ್ರಗಾಮಿಗಳ ಸ್ಪೀಪರ್‌ ಸೆಲ್‌ ಆಗುತ್ತಿದೆ. ಎನ್‍ಐಎ ರಾಜ್ಯಕ್ಕೆ ಬಂದು ಉಗ್ರಗಾಮಿಗಳನ್ನು ಬಂಧಿಸುತ್ತದೆ. ಆದರೆ, ಇಲ್ಲಿರುವ ಪೊಲೀಸರು ಮಾತ್ರ ಉಗ್ರಗಾಮಿಗಳ ಬಗ್ಗೆ ಮಾಹಿತಿಯೇ ಇಲ್ಲ. ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.

ಸಾರಿಗೆ ಇಲಾಖೆ ಮಾರಾಟ:

ಗ್ಯಾರಂಟಿ ಯೋಜನೆ ನೆಪದಲ್ಲಿ ಸಾರಿಗೆ ಇಲಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನುದಾನದಲ್ಲಿ ಸಾರಿಗೆ ಇಲಾಖೆ ಬಸ್‌ ಖರೀದಿಸಿದೆ. ಇವರು ಇಲಾಖೆಯಲ್ಲಿ ಉಳಿದ ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ನೀಡಿದ್ದಾರೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಬಿ.ವಿ. ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಶರಣು ತಳ್ಳಿಕೇರಿ, ಡಾ. ಬಸವರಾಜ್ ಕ್ಯಾಟರ್ ಇದ್ದರು.