ಕಾರ್ಮಿಕರ ಜೀವನ ಭದ್ರತೆಗಾಗಿ ಸರ್ಕಾರ ಅನೇಕ ಸೌಲಭ್ಯ: ತಮ್ಮಯ್ಯ

| Published : Nov 06 2025, 01:15 AM IST

ಸಾರಾಂಶ

ಚಿಕ್ಕಮಗಳೂರು, ಕಾರ್ಮಿಕರ ಜೀವನ ಭದ್ರತೆಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ಸೌಲಭ್ಯ, ಹೆರಿಗೆ ಧನಸಹಾಯ ಹಾಗೂ ಆಕಸ್ಮಿಕ ಅವಘಡದಲ್ಲಿ ಕೈಕಾಲು ದುರ್ಬಲಗೊಂಡರೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಿಸುವ ಮೂಲಕ ಆಸರೆಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸುರಕ್ಷಿತ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾರ್ಮಿಕರ ಜೀವನ ಭದ್ರತೆಗಾಗಿ ರಾಜ್ಯ ಸರ್ಕಾರ ವೈದ್ಯಕೀಯ ಸೌಲಭ್ಯ, ಹೆರಿಗೆ ಧನಸಹಾಯ ಹಾಗೂ ಆಕಸ್ಮಿಕ ಅವಘಡದಲ್ಲಿ ಕೈಕಾಲು ದುರ್ಬಲಗೊಂಡರೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಿಸುವ ಮೂಲಕ ಆಸರೆಯಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಕಾರ್ಮಿಕ ಭವನದಲ್ಲಿ ಬುಧವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ತಾಲೂಕಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಶ್ರಮ ಸಾಮರ್ಥ್ಯ ಯೋಜನೆಯಡಿ ವಿವಿಧ ವೃತ್ತಿಗಳಿಗೆ ಸುರಕ್ಷಿತ ಕಿಟ್ ವಿತರಿಸಿ ಮಾತನಾಡಿದರು.ಮಧ್ಯಮ ಹಾಗೂ ಶ್ರೀಮಂತ ವರ್ಗ ಕನಿಷ್ಠ ₹10 ಲಕ್ಷ ರು.ಗಳಲ್ಲಿ ನಿರ್ಮಾಣ ಮಾಡುವ ಮನೆಗಳಿಗೆ ಶೇ. 1ರಷ್ಟು ತೆರಿಗೆ ಮೊತ್ತವನ್ನು ಕಟ್ಟಡ ಕಾರ್ಮಿಕರು ತೆರಿಗೆ ರೂಪದಲ್ಲಿ ಕಾರ್ಮಿಕ ಇಲಾಖೆಗೆ ಭರಿಸಬೇಕು. ಈ ರೀತಿ ಸೆಸ್ ಬಳಕೆಯನ್ನು ಕಟ್ಟಡ ಕಾರ್ಮಿಕರ ಜೀವನೋಪಾಯಕ್ಕಾಗಿ ಮಿಸಲಿಟ್ಟು ದುಡಿಯುವ ಕುಟುಂಬಗಳ ಸೌಖ್ಯಕ್ಕಾಗಿ ಸರ್ಕಾರ ಬಳಸುತ್ತಿದೆ ಎಂದರು.ದೇಶದಲ್ಲಿ ಮನಮೋಹನ್‌ಸಿಂಗ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅಧಿಕಾರಾವಧಿಯಲ್ಲಿ ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ, ಕಾರ್ಮಿಕರಿಗೆ ಕಾನೂನು ಜಾರಿಗೊಳಿಸಿತು. ಅಂಬೇಡ್ಕರ್ ಸಿದ್ಧಾಂತದಂತೆ ರಾಷ್ಟ್ರದ ಕಟ್ಟಕಡೆ ವ್ಯಕ್ತಿಗೂ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಂಡಿತು ಎಂದು ಸ್ಮರಿಸಿದರು.ಕಾರ್ಮಿಕ ಕುಟುಂಬಗಳಿಗೆ ಆರೋಗ್ಯ, ಶಿಕ್ಷಣ ಹಾಗೂ ಆಹಾರ ಭದ್ರತೆ ಒದಗಿಸುವುದು ಜನಪ್ರತಿನಿಧಿ ಹಾಗೂ ಸರ್ಕಾರ ಮೂಲ ಧ್ಯೇಯವಾಗಿದ್ದು, ಅದರಂತೆ ರಾಜ್ಯ ಸರ್ಕಾರ ದುಡಿಯುವ ಜನತೆಗೆ ಎಲ್ಲೂ ಕೊರತೆಯಾಗದಂತೆ ವೃತ್ತಿಗನುಸಾರ ಸುರಕ್ಷಿತಾ, ಟೂಲ್ ಕಿಟ್‌ಗಳನ್ನು ಒದಗಿಸಲಾಗುತ್ತಿದೆ ಎಂದರು.ಪ್ರಸ್ತುತ ಕಾರ್ಮಿಕ ಇಲಾಖೆಯಿಂದ ತಾಲೂಕಿನಲ್ಲಿ 1148 ಕಾರ್ಮಿಕರು ನೋಂದಣಿಯಾಗಿದ್ದಾರೆ. ಈ ಪೈಕಿ 211 ಫಲಾನುಭವಿ ಗಳಿಗೆ ₹2.25 ಕೋಟಿ ರು. ಮದುವೆ ಧನಸಹಾಯ, 16 ಫಲಾನುಭವಿಗಳಿಗೆ 52 ಸಾವಿರ ವೈದ್ಯಕೀಯ, 48 ಫಲಾನುಭವಿಗಳಿಗೆ ₹24.47 ಲಕ್ಷ ರುಗಳ ಪ್ರಮುಖ ವೈದ್ಯಕೀಯ ಹಾಗೂ 31 ಫಲಾನುಭವಿಗಳಿಗೆ ₹15.50 ಲಕ್ಷ ರು.ಗಳ ಹೆರಿಗೆ ಧನಸಹಾಯ ಪಾವತಿಸಲಾಗಿದೆ ಎಂದು ತಿಳಿಸಿದರು.ಕಾರ್ಮಿಕ ಇಲಾಖೆ ಚಿಕ್ಕಮಗಳೂರು ವಿಭಾಗದ ಸಹಾಯಕ ಆಯುಕ್ತ ಸುಭಾಷ್ ಎಂ.ಆಲದಕಟ್ಟಿ ಮಾತನಾಡಿ, ಸುಮಾರು 90 ಮೃತ ಕಾರ್ಮಿಕ ಫಲಾನುಭವಿಗಳ ಕುಟುಂಬಕ್ಕೆ ₹67.50 ಲಕ್ಷ ರು. ಅಂತ್ಯಸಂಸ್ಕಾರ ಮತ್ತು ಮರಣ ಧನಸಹಾಯ, ನಾಲ್ವರ ಅಪಘಾತ ಕುಟುಂಬಕ್ಕೆ ₹20 ಲಕ್ಷ ಮರಣ ಧನಸಹಾಯ ಸೇರಿದಂತೆ ಒಟ್ಟು 1741 ಫಲಾನುಭವಿಗಳಿಗೆ ₹10.26 ಕೋಟಿ ರು.ಗಳ ವಿವಿಧ ಧನಸಹಾಯ ಸರ್ಕಾರ ಪಾವತಿಸಿದೆ ಎಂದು ತಿಳಿಸಿದರು.ಇದೇ ವೇಳೆ ವಿವಿಧ 400 ಕಾರ್ಮಿಕರಿಗೆ ಹಾಗೂ ಶ್ರವಣದೋಷದಿಂದ ಬಳಲುತ್ತಿರುವ ಕಾರ್ಮಿಕರ ಮಕ್ಕಳಿಗೆ ಶ್ರವಣದೋಷ ವಿತರಿಸಲಾಯಿತು. ಬಳಿಕ 200 ಕಾರ್ಮಿಕರಿಗೆ ಸುರಕ್ಷಿತ ಕುರಿತು ತರಬೇತಿ ಕಾರ್‍ಯಾಗಾರ ಏರ್ಪಡಿಸಲಾಗಿತ್ತು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ಬಾಬು, ಜಿಲ್ಲಾ ಶ್ರವಣ ದೋಷ ನಿರ್ವಹಣಾಧಿಕಾರಿ ಶಶಿಕಲಾ, ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಸಿ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕ ಎಚ್.ಕೆ. ಪ್ರಭಾಕರ್, ಪ್ರವೀಣ್‌ಕುಮಾರ್, ಸುಕ್ಷಿರತ ಕಿಟ್ ವಿತರಣಾ ಕಂಪನಿ ಚೇತನ್ ಉಪಸ್ಥಿತರಿದ್ದರು. 5 ಕೆಸಿಕೆಎಂ 1ಚಿಕ್ಕಮಗಳೂರಿನ ಕಾರ್ಮಿಕ ಭವನದಲ್ಲಿ ಬುಧವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಶ್ರಮ ಸಾಮರ್ಥ್ಯ ಯೋಜನೆಯಡಿ ವಿವಿಧ ವೃತ್ತಿಗಳಿಗೆ ಸುರಕ್ಷಿತ ಕಿಟ್‌ಗಳನ್ನು ಶಾಸಕ ಎಚ್‌.ಡಿ. ತಮ್ಮಯ್ಯ ವಿತರಿಸಿದರು.