ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲಾಗುವುದು. ಬಿಜೆಪಿ ಕೂಡ ಬರ ಅಧ್ಯಯನ ನಡೆಸುತ್ತಿರುವುದು ಸ್ವಾಗತಾರ್ಹ. ಅವರು ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೂ ಸಲ್ಲಿಸಿ ರಾಜ್ಯಕ್ಕೆ ಅಗತ್ಯ ನೆರವು ದೊರಕುವಂತೆ ಮಾಡಲಿ ಎಂದು ಸಂತೋಷ ಲಾಡ್‌ ಹೇಳಿದರು.

ಹುಬ್ಬಳ್ಳಿ:

ಮುಖ್ಯಮಂತ್ರಿ ಸೂಚನೆಯಂತೆ ರಾಜ್ಯದ ಎಲ್ಲ ತಾಲೂಕುಗಳಿಗೆ ಸಚಿವರು ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆಂದು ಹೇಳಿದ ಸಚಿವ ಸಂತೋಷ ಲಾಡ್, ಬಿಜೆಪಿ ಸಹ ತಮ್ಮ ಅಧ್ಯಯನದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ರಾಜ್ಯಕ್ಕೆ ಅಗತ್ಯ ನೆರವು ಕೊಡಿಸಲಿ ಎಂದು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲಾಗುವುದು. ಬಿಜೆಪಿ ಕೂಡ ಬರ ಅಧ್ಯಯನ ನಡೆಸುತ್ತಿರುವುದು ಸ್ವಾಗತಾರ್ಹ. ಅವರು ತಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೂ ಸಲ್ಲಿಸಿ ರಾಜ್ಯಕ್ಕೆ ಅಗತ್ಯ ನೆರವು ದೊರಕುವಂತೆ ಮಾಡಲಿ ಎಂದರು.

ಕೇಂದ್ರ ಸರ್ಕಾರ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯಕ್ಕೆ ಬೆಳೆ ಪರಿಹಾರದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಿಗೆ ನೀಡುವಷ್ಟು ಅನುದಾನ ಕರ್ನಾಟಕಕ್ಕೆ ಸಿಕ್ಕಿಲ್ಲ ಎಂದು ದೂರಿದ ಅವರು, ಬೆಳೆವಿಮೆ ನಿಯಮಾವಳಿಗಳಲ್ಲಿ ಬದಲಾವಣೆ ಅಗತ್ಯವಿದೆ. ರೈತರು ಮಧ್ಯಂತರ ಪರಿಹಾರಕ್ಕೆ ಆಗ್ರಹಿಸುತ್ತಿರುವುದು ನ್ಯಾಯಸಮ್ಮತ ಬೇಡಿಕೆ ಎಂದು ಹೇಳಿದರು.

ಎಸ್‌ಐಆರ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. ನಾವು(ಕಾಂಗ್ರೆಸ್) ಮಾಡುತ್ತಿರುವ ಆರೋಪಗಳಿಗೆ ಅಂಕಿ-ಅಂಶಗಳ ಆಧಾರವಿದೆ ಎಂದು ಹೇಳಿದರು.

ಪ್ರಧಾನಿ ಪರಿಹಾರ ನಿಧಿಗೆ ಸಂಬಂಧಿಸಿದ ₹20 ಸಾವಿರ ಕೋಟಿ ಕುರಿತು ಪ್ರಧಾನಿ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್‌ನ 70 ವರ್ಷದ ಆಡಳಿತದ ಲೆಕ್ಕ ಕೇಳುವ ಬಿಜೆಪಿ, ಈ ವಿಚಾರದಲ್ಲಿ ಉತ್ತರ ನೀಡುತ್ತಿಲ್ಲ. ಹಾರಿಕೆ ಉತ್ತರ ನೀಡುವುದರಲ್ಲಿ ಅವರು ಪರಿಣಿತಿ ಹೊಂದಿದ್ದಾರೆಂದು ಆರೋಪಿಸಿದರು.ಎರಡ್ಮೂರು ದಿನದಲ್ಲಿ ಖಾತೆ ಹಂಚಿಕೆ

ಎರಡ್ಮೂರು ದಿನಗಳಲ್ಲಿ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದೆ. ಯಾವ ಖಾತೆ ಸಿಕ್ಕರೂ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು. ಸಚಿವ ಸ್ಥಾನ ಸಿಗದವರಿಗೆ ಅರ್ಹತೆ ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ಎಲ್ಲ ಶಾಸಕರಿಗೂ ಅರ್ಹತೆ ಇದೆ. ಈ ಬಾರಿ ನನಗೆ ಅವಕಾಶ ದೊರೆತಿರುವುದನ್ನು ಅದೃಷ್ಟವೆಂದು ಭಾವಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದಲ್ಲಿ ರಾಜಕೀಯ ಬದಲಾವಣೆಯ ವಾತಾವರಣ ನಿರ್ಮಾಣವಾಗುತ್ತಿದೆ. ಜೆನ್-ಜಿ ಪೀಳಿಗೆ ಹೊಸ ರಾಜಕೀಯ ಚಿಂತನೆಗೆ ಮುನ್ನುಡಿ ಬರೆಯುತ್ತಿದೆ. ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ ಸೋಲುವುದು ಖಚಿತ. ಆದರೆ, ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಬದಲು ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.