ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆ ಆತಂಕಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಕೆಲ ಸಚಿವರೊಂದಿಗೆ ಸೋಮವಾರ ರಾತ್ರಿ ಸಭೆ ನಡೆಸಿದ ಬಗ್ಗೆ ನನಗೂ ಮಾಹಿತಿ ಲಭ್ಯವಾಗಿದೆ. ಮುಂದೆ ಏನಾಗುತ್ತದೆ ಕಾದು ನೋಡೋಣ.
ಕನ್ನಡ ಪ್ರಭ ವಾರ್ತೆ ಮದ್ದೂರು
ದಸರಾ ಬಳಿಕ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ವಿರೋಧಿಸಿ ಮಂಡ್ಯದಿಂದಲೇ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.ನಾಗಮಂಗಲದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ತಾಲೂಕಿನ ಚಾಮನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ, ಸ್ವೀಕರಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಪಕ್ಷದ ಮಾಜಿ ಸಚಿವರು, ಮಾಜಿ ಶಾಸಕರ ಸಮ್ಮುಖದಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಹಗರಣ, ಬರ ಪರಿಹಾರದ ಬಗ್ಗೆ ರಾಜ್ಯ ಸರ್ಕಾರದ ವೈಫಲ್ಯ, ಬಿಡದಿ ಟೌನ್ ಶಿಪ್ ಯೋಜನೆ, ಮೈಷುಗರ್ ಕಾರ್ಖಾನೆ ಅವ್ಯವಹಾರ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆ ಆತಂಕಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಕೆಲ ಸಚಿವರೊಂದಿಗೆ ಸೋಮವಾರ ರಾತ್ರಿ ಸಭೆ ನಡೆಸಿದ ಬಗ್ಗೆ ನನಗೂ ಮಾಹಿತಿ ಲಭ್ಯವಾಗಿದೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದಷ್ಟೇ ಕುಮಾರಸ್ವಾಮಿ ಉತ್ತರ ನೀಡಿದರು. ಇದೇ ವೇಳೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಗುಂಪೊಂದು ರಾಜ್ಯದ ಮುಖ್ಯಮಂತ್ರಿ ನೀವೇ ಆಗಬೇಕು ಎಂದು ಘೋಷಣೆ ಕೂಗಿದರು. ಈಗಲೇ ಅದರ ಪ್ರಸ್ತಾಪ ಬೇಡ ಎಂದು ಕಾರ್ಯಕರ್ತರಿಗೆ ಕೈಮುಗಿದು ಪ್ರಾರ್ಥಿಸಿದರು.
ಜೆಡಿಎಸ್ ಮುಖಂಡರಾದ ಚಾಮನಹಳ್ಳಿ ವಿಜಯ್ ಗೌಡ ಅಲಿಯಾಸ್ ರಾಕಿ, ಗ್ರಾಪಂ ಮಾಜಿ ಅಧ್ಯಕ್ಷ ದೇಶಹಳ್ಳಿ ಸಿದ್ದರಾಜು, ಕೃಷ್ಣ,ಶಿವಣ್ಣ, ಅರ್ಜುನ್, ರಾಮಣ್ಣ, ಜಯರಾಮ್, ಕಾಡಯ್ಯ, ಪ್ರತಾಪ್, ದಿನೇಶ್, ರಾಜೇಶ್,, ಜೈರಾಮು, ತೇಜಸ್ ಮತ್ತಿತರರು ಇದ್ದರು.