ಚಿಕ್ಕಮಗಳೂರುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುವ ಜೊತೆಗೆ ಮೂಲಸೌಕರ್ಯಕ್ಕೆ ಕೋಟ್ಯಾಂತರ ರುಪಾಯಿ ಅನುದಾನ ಒದಗಿಸಿ ವಿರೋಧ ಪಕ್ಷದ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
- ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ । ₹1.5 ಕೋಟಿ ವೆಚ್ಚದಲ್ಲಿ ಡಾಂಬರೀಕರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸುವ ಜೊತೆಗೆ ಮೂಲಸೌಕರ್ಯಕ್ಕೆ ಕೋಟ್ಯಾಂತರ ರುಪಾಯಿ ಅನುದಾನ ಒದಗಿಸಿ ವಿರೋಧ ಪಕ್ಷದ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶಾಂತಿನಗರದ ಭಗತ್‌ಸಿಂಗ್ ಆಟೋ ನಿಲ್ದಾಣ ಹಾಗೂ ಇಂದಿರಾಗಾಂಧಿ ಬಡಾವಣೆ ಸಮೀಪ ₹1.5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.ಪಂಚ ಗ್ಯಾರಂಟಿ ಯೋಜನೆ ಕೇವಲ ಒಂದು ಜನಾಂಗಕ್ಕೆ ಸೀಮಿತಗೊಳಿಸಿಲ್ಲ. ಸರ್ವಧರ್ಮದ ಏಳಿಗೆಗೆ ಪೂರೈಸುವ ಮೂಲಕ ವರ್ಷಕ್ಕೆ ₹57 ಸಾವಿರ ಕೋಟಿ ಗಳನ್ನು ಸರ್ಕಾರ ಜನತೆಯ ಅಭಿವೃದ್ಧಿಗೆ ಭರಿಸುತ್ತಿದೆ. ಅಲ್ಲದೇ ಟೀಕಿಸುವ ಕೆಲವರು ಗ್ಯಾರಂಟಿ ಯೋಜನೆ ಸದ್ಬಳಕೆ ಮಾಡಿಕೊಂಡು, ಹೊರಗಡೆ ಬಂದು ಟೀಕಿಸುವುದು ಶೋಭೆ ತರುವುದಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಗ್ಯಾರಂಟಿ ಜೊತೆಗೆ ನಗರಸಭೆಗೆ ವಿಶೇಷ ಅನುದಾನ ನೀಡಿದ್ದಾರೆ. ಅಲ್ಪ ಸಂಖ್ಯಾತರ ಅಭಿವೃದ್ಧಿಗೆ 5 ಲಕ್ಷ ರೂ., ಎಲ್ಲಾ ವಾರ್ಡ್‌ಗಳ ಅಭಿವೃದ್ಧಿಗೆ ₹5 ಕೋಟಿ ಹಾಗೂ ನಗರಸಭೆಗೆ ವಿಶೇಷವಾಗಿ ₹10 ಕೋಟಿ ಅನುದಾನ ನೀಡಲಾಗಿದ್ದು, ಈಗಾಗಲೇ ಬಹುತೇಕ ಎಲ್ಲಾ ಕಾಮಗಾರಿಗಳ ಗುದ್ದಲಿ ಪೂಜೆ ಪೂರ್ಣಗೊಂಡು ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.ಇತ್ತೀಚೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಡಾಂಬರೀಕರಣ ಗುದ್ದಲಿಪೂಜೆಗೆ ಸೀಮಿತವಾಗುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಟೀಕಿಸುವವರು ಒಮ್ಮೆ ನಾಯ್ಡು ಬೀದಿ, ಪ್ರಭು ಸ್ಟ್ರೀಟ್, ವಿಜಯಪುರ ಮುಖ್ಯರಸ್ತೆಗಳನ್ನು ಗಮನಿಸಿದರೆ ತಕ್ಕ ಉತ್ತರ ಲಭ್ಯವಾಗಲಿದ್ದು, ಕಾಂಗ್ರೆಸ್ ಪಕ್ಷ ಜನತೆ ಆರ್ಶೀವಾದ ಪಡೆಯುತ್ತದೆ ಹೊರತು ಸುಳ್ಳು ವದಂತಿಗೆ ಕಿವಿಗೊಡುವುದಿಲ್ಲ ಎಂದರು.
94 ಸಿಯಲ್ಲಿ 17 ಮತ್ತು 18ನೇ ವಾರ್ಡಿನ ನಿವಾಸಿಗಳಿಗೆ 2004 ರ ಹಿಂದೆ ನೀಡಿರುವ ಹಕ್ಕುಪತ್ರ ಅಸಲಿಯಾಗಿವೆ. ನಂತರ ದಿನದಲ್ಲಿ ನೀಡಿದ ಸ್ವಾಧೀನಪತ್ರಕ್ಕೆ ಬಿಡಿಗಾಸಿನ ಬೆಲೆಯಿಲ್ಲ. ಖಾತೆ, ಸಾಲ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಕೆಲವು ತಿಂಗಳಲ್ಲೇ ಈ ಭಾಗದ ಅರ್ಹ ಫಲಾನುಭವಿಗಳಿಗೆ ಅಸಲಿ ಹಕ್ಕುಪತ್ರ ವಿತರಿಸುವ ಮೂಲಕ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.ನಗರಸಭೆ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ವಾರ್ಡ್ ನಂ.16, 17 ಮತ್ತು 18 ಕ್ಕೆ ಅನುದಾನಕ್ಕಾಗಿ ಶಾಸಕರಿಗೆ ಮನವಿ ಮಾಡಿದಾಗ ಮುಖ್ಯಮಂತ್ರಿ ನಿಧಿ ಮತ್ತು ಅಲ್ಪಸಂಖ್ಯಾತರ ಅನುದಾನದಡಿ ವಾರ್ಡ್‌ಗಳಿಗೆ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಒತ್ತು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರಸ್ತುತ 17ನೇ ವಾರ್ಡಿನ ಉಪ್ಪಳ್ಳಿ ವಾಟರ್‌ಟ್ಯಾಂಕ್ ರಸ್ತೆ, ಕೇಕ್ ಪ್ಯಾಲೇಸ್‌ನಿಂದ ಯುನೈಟೆಡ್ ಶಾಲೆ ಯವರೆಗೆ, ಆಟೋ ಸ್ಟ್ಯಾಂಡ್‌ನಿಂದ ಎಲ್‌ಜೆ ಬೇಕರಿವರೆಗೆ ಹಾಗೂ 18ನೇ ವಾರ್ಡಿನ ಇಂದಿರಾಗಾಂಧೀ ಬಡಾವಣೆಯ ಮೂರು ರಸ್ತೆಗಳ ಡಾಂಬರೀಕರಣಕ್ಕೆ ಒಟ್ಟು ₹1.5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದರು.ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಜನತೆಗೆ ಮೂಲಭೂತ ಸವಲತ್ತಿಗೆ ಸಮಸ್ಯೆ ಯಾಗ ದಂತೆ ಗಮನಹರಿಸುವುದು ಜನ ಪ್ರತಿನಿಧಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ಇಂದು ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದ್ದು ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ, ಸದಸ್ಯ ಖಲಂದರ್, ಸಿಡಿಎ ಸದಸ್ಯರಾದ ಸುದೀಪ್, ಗುಣವತಿ, ಅಲ್ಪಸಂಖ್ಯಾತ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಉಮರ್, ಆಶ್ರಯ ಸಮಿತಿ ಅಧ್ಯಕ್ಷ ಪ್ರಸಾದ್ ಅಮೀನ್, ಮುಖಂಡರಾದ ಸಾದಿಕ್, ಬಿ.ಎಚ್.ಹರೀಶ್, ಜಮೀರ್, ಖೈರುಲ್ಲಾ, ಗಿರೀಶ್, ಕೆ.ಮಹಮ್ಮದ್, ಮಂಜುಳಾ, ಸುಮಿತ್ರಾ ಉಪಸ್ಥಿತರಿದ್ದರು. 21 ಕೆಸಿಕೆಎಂ 2ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಚ್.ಡಿ. ತಮ್ಮಯ್ಯ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ, ಮುನೀರ್, ನಯಾಜ್, ಖಲಂದರ್ ಇದ್ದರು.