ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ತಾಲೂಕುಗಳಿದ್ದರೂ ಕೇವಲ ಒಂಬತ್ತು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೂ ಹಲವು ತಾಲೂಕುಗಳು ಬರದ ಪರಿಣಾಮ ಎದುರಿಸುತ್ತಿದ್ದರೂ ಸೀಮಿತ ಪ್ರದೇಶಗಳನ್ನು ಮಾತ್ರ ಬರಪೀಡಿತವೆಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಆದರೆ ಆಲೂರು ಹಾಗೂ ಬೇಲೂರು ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದರೂ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಾ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಬರಪೀಡಿತ ಪ್ರದೇಶಗಳ ಘೋಷಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್. ನಾರಾಯಣಗೌಡ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕೆಲವೆಡೆ ಶೇ.೫೦ಕ್ಕೂ ಕಡಿಮೆ ಮಳೆಯಾಗಿದ್ದು, ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಬಿತ್ತನೆ ಪ್ರಮಾಣವೂ ಶೇ.೪೦ರಷ್ಟಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಆದರೆ ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಮಲೆನಾಡು ಭಾಗದಲ್ಲಿ ಶೇ.೩೪, ಕರಾವಳಿ ಭಾಗದಲ್ಲಿ ಶೇ.೩೦, ಉತ್ತರ ಒಳನಾಡಿನಲ್ಲಿ ಶೇ.೨೪ ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.೧೮ರಷ್ಟು ಮಳೆ ಕೊರತೆಯಿದೆ. ಆದರೂ ಬರ ಪರಿಸ್ಥಿತಿಯನ್ನು ನಿರ್ಧರಿಸುವಾಗ ಈ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಹೇಳಿದರು. ಮುಂಗಾರು ಹಂಗಾಮಿನಲ್ಲಿ ರಾಜ್ಯದ ಸುಮಾರು ೮೪ ಲಕ್ಷ ಎಕರೆ ಭೂಮಿ ಮಳೆಯಾಶ್ರಿತವಾಗಿದ್ದು, ಸರ್ಕಾರದ ಪ್ರಕಾರ ಶೇ.೬೦ರಷ್ಟು ಮಾತ್ರ ಬಿತ್ತನೆಯಾಗಿದೆ. ಆದರೆ ವಾಸ್ತವ ಪರಿಸ್ಥಿತಿ ಇದಕ್ಕಿಂತಲೂ ಗಂಭೀರವಾಗಿದೆ. ಹಲವು ಕಡೆ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಒಣಗಿ ಹೋಗಿವೆ ಎಂದು ನಾರಾಯಣಗೌಡ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ತಾಲೂಕುಗಳಿದ್ದರೂ ಕೇವಲ ಒಂಬತ್ತು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೂ ಹಲವು ತಾಲೂಕುಗಳು ಬರದ ಪರಿಣಾಮ ಎದುರಿಸುತ್ತಿದ್ದರೂ ಸೀಮಿತ ಪ್ರದೇಶಗಳನ್ನು ಮಾತ್ರ ಬರಪೀಡಿತವೆಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಆದರೆ ಆಲೂರು ಹಾಗೂ ಬೇಲೂರು ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಹೇಳಿದರು.ಜಿಲ್ಲೆಯಾದ್ಯಂತ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಕೆರೆ- ಕಟ್ಟೆಗಳಲ್ಲಿಯೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಸರ್ಕಾರ ಕೂಡಲೇ ವಿಶೇಷ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರ ಸಂಕಷ್ಟ ನಿವಾರಣೆಗೆ ಕೂಡಲೇ ಸಾಲಮನ್ನಾ ಮಾಡಬೇಕು. ೨೦೧೯ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಎನ್‌ಡಿಆರ್‌ಎಫ್ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಎಕರೆಗೆ ಹೆಚ್ಚುವರಿಯಾಗಿ ₹೧೦ ಸಾವಿರ ನೀಡಿತ್ತು. ನೀರಾವರಿ ಬೆಳೆಗೆ ಪ್ರತಿ ಎಕರೆಗೆ ₹೨೬,೫೦೦ ಪರಿಹಾರ ನೀಡಲಾಗಿತ್ತು. ಇದೇ ಮಾದರಿಯಲ್ಲಿ ಪ್ರಸ್ತುತ ಸಂಕಷ್ಟದಲ್ಲಿರುವ ರೈತರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಪಾವತಿಸಬೇಕಾದ ಶೇ.೧೦೦ರಷ್ಟು ಪ್ರೀಮಿಯಂ ಅನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಪ್ರತಿಯೊಂದು ತಾಲೂಕಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಬೆಳೆ ಹಾನಿಗೊಳಗಾದ ರೈತರಿಗೆ ತ್ವರಿತವಾಗಿ ಪರಿಹಾರ ತಲುಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತನ್ನ ಓಲೈಕೆ ನೀತಿ ಹಾಗೂ ರೈತ ವಿರೋಧಿ ನೀತಿಯನ್ನು ಮುಂದುವರಿಸಿದರೆ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಟರಾಜು, ನಾಗೇಶ್, ಕಾರ್ಯಕಾರಿ ಮಂಡಳಿ ಸದಸ್ಯ ಶಕುನಿಗೌಡ ಇತರರು ಉಪಸ್ಥಿತರಿದ್ದರು.