ಬರಪೀಡಿತ ಪ್ರದೇಶಗಳ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಸಮಗ್ರ ಅಧ್ಯಯನ ನಡೆಸಿ ವೈಜ್ಞಾನಿಕ ರೀತಿಯಲ್ಲಿ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬರಪೀಡಿತ ಪ್ರದೇಶಗಳ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಸಮಗ್ರ ಅಧ್ಯಯನ ನಡೆಸಿ ವೈಜ್ಞಾನಿಕ ರೀತಿಯಲ್ಲಿ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಯಾದಗಿರಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬರಗಾಲ ಆವರಿಸಿದ್ದು, ಸರ್ಕಾರ ಕೆಲವು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ, ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೇ.75ರಷ್ಟು ಬರಗಾಲ ಆವರಿಸಿದೆ. ಆದರೆ, ರಾಜ್ಯ ಸರ್ಕಾರ ಆಯ್ದ ತಾಲೂಕುಗಳಲ್ಲಿ ಮಾತ್ರ ಬರವಿದೆ ಎಂದು ಘೋಷಣೆ ಮಾಡಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದು ತಾಲೂಕೂ ಬರಗಾಲ ಪಟ್ಟಿಯಲ್ಲಿಲ್ಲ. ರಾಯಚೂರು, ಗದಗ, ಬೆಳಗಾವಿ, ಕೊಪ್ಪಳ ಹೀಗೆ ಅನೇಕ ಜಿಲ್ಲೆಗಳಲ್ಲಿ ಬಹುತೇಕ ತಾಲೂಕುಗಳಲ್ಲಿ ಬೆಳೆಹಾನಿ ಸಂಭವಿಸಿದೆ. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿಕೊಂಡಿದೆ ಎಂದರು.ರಾಜ್ಯದ 132 ತಾಲೂಕುಗಳಲ್ಲಿ 1 ಸಾವಿರ ಫೀಟ್ ಕೆಳಗಡೆ ಹೋದರೆ ನೀರು ಸಿಗುತ್ತಿಲ್ಲ. ರಾಜ್ಯದಲ್ಲಿ ಮಳೆಗಾಲ ಇದ್ದಾಗಲೂ ಕೆಲ ತಾಲೂಕುಗಳಲ್ಲಿ ಬರ ಪರಸ್ಥಿತಿ ಇರುತ್ತದೆ. ಉದಾಹರಣೆಗೆ ಯಾದಗಿರಿ ಜಿಲ್ಲೆಯ ಗುರಮಠಕಲ್, ಯಾದಗಿರಿ, ಸುರಪುರ ತಾಲೂಕುಗಳು ಅತೀಹೆಚ್ಚು ಬರಪೀಡಿತವಾಗಿದ್ದರೂ ಸರ್ಕಾರ ಘೋಷಣೆ ಮಾಡದೆ ಅನ್ನದಾತರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
2022ರಲ್ಲಿ ರಾಜ್ಯದಲ್ಲಿ ಬರಗಾಲ ಆವರಿಸಿತ್ತು. ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಎನ್‌ಡಿರ್‌ಎಫ್ ನಿಯಮಾವಳಿ ₹8500 ಸೇರಿ, ಹೆಚ್ಚುವರಿ ₹10 ಸಾವಿರ ಸಹಿತ ಒಟ್ಟು ₹18500 ಪ್ರತಿ ಎಕೆರೆಗೆ ಎಂಬಂತೆ 38 ಲಕ್ಷ ರೈತರಿಗೆ ಪರಿಹಾರ ನೀಡಿದ್ದರು. ರಾಜ್ಯದಲ್ಲಿ 3500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರ ಏನು ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಮಂತ್ರಿಗಳು, ಶಾಸಕರು ಹೇಳಿದ ತಾಲೂಕುಗಳು ಮಾತ್ರ ಬರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು ನಾಚಿಕೆಗೇಡಿನ ಸಂಗತಿ. ಬರ ಪರಸ್ಥಿತಿ ಬಂದಾಗ ಶೇ.75 ರಷ್ಟು ಕೇಂದ್ರ ಶೇ.25 ರಷ್ಟು ರಾಜ್ಯ ಸರ್ಕಾರ ಪರಿಹಾರ ನೀಡುತ್ತದೆ ಎಂದು ಕಿಡಿ ಕಾರಿದರು.ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಕಾಟಾಚಾರಕ್ಕೆಂಬಂತೆ ಬರ ಅಧ್ಯಯನ ನಡೆಸುತ್ತಿದ್ದಾರೆ. ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಿ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿದೆ ಎಂದು ಎನ್. ರವಿಕುಮಾರ ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ವಿರೋಧಿಯಾಗಿದೆ. ಮುಖ್ಯಮಂತ್ರಿಗಳು ಕಣ್ಣು ಮುಚ್ವಿಕೊಂಡು ಬರ ತಾಲೂಕು ಘೋಷಣೆ ಮಾಡಿದ್ದು ಈ ಪಟ್ಟಿಯನ್ನು ಪರಿಶೀಲಿಸಿ, ಸಮಗ್ರ ಅಧ್ಯಯನ ನಡೆಸಿ, ವೈಜ್ಞಾನಿಕ ರೀತಿಯಲ್ಲಿ ಬರಗಾಲ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಪ್ರಮುಖರಾದ ಮಹೇಶರೆಡ್ಡಿ ಮುದ್ನಾಳ್, ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ವೆಂಕಟರಡ್ಡಿ ಅಬ್ಬೆತುಮಕೂರ ಇದ್ದರು.