ಸಾರಾಂಶ
ಹೆರಿಗೆ ಆಸ್ಪತ್ರೆ ಆವರಣದಲ್ಲಿ ರೋಟರಿ ಕಾಫಿ ಲ್ಯಾಂಡ್ ನಿರ್ಮಿಸಿರುವ ಥೀಮ್ ಪಾರ್ಕ್ ಸಾರ್ವಜನಿಕ ಸೇವೆಗೆ ಸಮರ್ಪಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲೆ ಬಿ.ಸಿ. ಗೀತಾ ಸಲಹೆ ನೀಡಿದರು.
ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ 1.75 ಲಕ್ಷ ರು. ವೆಚ್ಚದಲ್ಲಿ ರೋಟರಿ ಕಾಫಿ ಲ್ಯಾಂಡ್ ನಿರ್ಮಿಸಿರುವ ರೋಟರಿ ಥೀಮ್ ಪಾರ್ಕ್ ಅನ್ನು ಬುಧವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಸವಲತ್ತು ಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಇಂತಹ ಶ್ರಮ ಸಾರ್ಥಕವಾಗುತ್ತದೆ ಎಂದರು.ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು. ಹಾಗಾಗಿ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಸಾಮಾಜಿಕ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು, ಹೇಗೆ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಥೀಮ್ ಪಾರ್ಕಿನ ರೂವಾರಿ ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್ ಉದಾಹರಣೆ ಯಾಗಿದ್ದಾರೆ ಎಂದು ಹೇಳಿದರು.ರೋಟರಿ ವಲಯ ಉಪ ರಾಜ್ಯಪಾಲ ಅನಂತೇಗೌಡ ಮಾತನಾಡಿ, ರೋಟರಿ ಕಾಫಿ ಲ್ಯಾಂಡ್ ನ ಪದಾಧಿಕಾರಿಗಳು ಅತ್ಯುತ್ತಮವಾಗಿ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರೊಟೇರಿಯನ್ ಗುರುಮೂರ್ತಿ ಮಾತನಾಡಿ, ರೋಟರಿ ಸಂಸ್ಥೆ ಸಾರ್ವಜನಿಕರಿಂದ ಯಾವುದೇ ದೇಣೆಗೆ ಪಡೆಯದೇ ಸ್ವಂತ ಹಣದಿಂದ ಸೇವಾ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಆಸ್ಪತ್ರೆಗೆ ಥೀಮ್ ಪಾರ್ಕ್ ನಿರ್ಮಿಸಿಕೊಟ್ಟ ಹಿನ್ನೆಲೆಯಲ್ಲಿ ರೋಟರಿಕಾಫಿ ಲ್ಯಾಂಡ್ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪಿ. ತನೋಜ್ ನಾಯ್ಡು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ರೋಟರಿ ಕಾಫಿ ಲ್ಯಾಂಡ್ ನ ಪಲ್ಸ್ ಪೋಲಿಯೋ ಕಾರ್ಯಕ್ರಮ, ಸ್ವಚ್ಛ ಭಾರತ್, ನೀರು ಸಂರಕ್ಷಿಸಿ ಕಾರ್ಯಕ್ರಮ, ಅಂಗಾಂಗ ದಾನ ರೋಟರಿ ಚತುರ್ವಿಧ ಪರೀಕ್ಷೆ. ಎದೆ ಹಾಲಿನ ಮಹತ್ವ ಕುರಿತ ಕಾರ್ಯಕ್ರಮ ಉದ್ಘಾಟಿಸಲಾಯಿತು.ಇದಕ್ಕೂ ಮುನ್ನ ರೋಟರಿ ಕಾಫಿ ಲ್ಯಾಂಡ್ ನಿಂದ ನಗರದ ಸರ್ಕಾರಿ ಆಸ್ಪತ್ರೆಗೆ ಸಿಮೆಂಟ್ ಬೆಂಚ್ ಮತ್ತು ಮೈಕ್ ಸೆಟ್ ವಿತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ಹೆರಿಗೆ ಆಸ್ಪತ್ರೆಯ ಆರ್‌ಎಂಓ ಡಾ. ಕಲ್ಪನಾ, ಡಾ. ಚಂದ್ರಶೇಖರ್, ನಾಸಿರ್ ಹುಸೇನ್, ರೋಟರಿ ಕಾಫಿ ಲ್ಯಾಂಡ್ ಕಾರ್ಯದರ್ಶಿ ನಾಗೇಶ್ ಕೆಂಜಿಗೆ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ರಂಗರಾವ್, ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು. 3 ಕೆಸಿಕೆಎಂ 1ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆ ಆವರಣದಲ್ಲಿ ರೋಟರಿ ಕಾಫಿ ಲ್ಯಾಂಡ್ ನಿರ್ಮಿಸಿರುವ ರೋಟರಿ ಥೀಮ್ ಪಾರ್ಕ್‌ನ್ನು ಬಿ.ಸಿ. ಗೀತಾ ಅವರು ಬುಧವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.