ಸಾರಾಂಶ
ನೂತನ ಗ್ರಾಪಂ ಕಟ್ಟಡದ ಕಾಮಗಾರಿಗೆ ಚಾಲನೆ । ₹20 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕಡೂರುಜನರ ಬದುಕನ್ನು ಕಟ್ಟಿಕೊಡುವ ಜೊತೆ ಜನರ ಬದುಕಿನ ಸುಧಾರಣೆ ಮತ್ತು ರಾಜ್ಯದ ಅಭಿವೃದ್ಧಿ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ಕ್ಷೇತ್ರದ ಚಿಕ್ಕಂಗಳ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿ ಮತ್ತು 20 ಲಕ್ಷ ರು. ವೆಚ್ಚದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಬಹಳ ದಿನಗಳ ಬಳಿಕ ಗ್ರಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿಬಂದಿದೆ. ನನ್ನ ಅವಧಿಯಲ್ಲಿ ಅನೇಕ ಗ್ರಾ.ಪಂ.ಮತ್ತು ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗುತ್ತಿದ್ದು. ತಂಗಲಿ ಗ್ರಾಮ,ಅಣೆಗೆರೆ,ಜೋಡಿ ತಿಮ್ಮಾಪುರ, ಗಂಗನಹಳ್ಳಿ ಪಂಚಾಯ್ತಿ ಕಟ್ಟಡಗಳು ಉದ್ಘಾಟನೆಯಾಗಿವೆ. ನಮ್ಮ ಕಡೂರು ಕ್ಷೇತ್ರದ 49 ಗ್ರಾ.ಪಂ.ಗಳಲ್ಲಿ 20ಕ್ಕೂ ಹೆಚ್ಚು ಗ್ರಾ.ಪಂ. ಕಟ್ಟಡಗಳು ನಿರ್ಮಾಣವಾಗುತ್ತಿವೆ. ಒಳ್ಳೇಕೆರೆ, ಅರಳಘಟ್ಟ,ಗರ್ಜೆ, ಪುರ, ಚಿಕ್ಕಬಳ್ಳೇಕೆರೆ,ಆಸಂದಿ, ಸರಸ್ವತಿಪುರ, ಕೆ.ಬಿದರೆ, ಬಿಸಲೇಹಳ್ಳಿ, ಹುಳಿಗೆರೆ, ಗಿರಿಯಾಪುರ,ಎಮ್ಮೇದೊಡ್ಡಿ, ಮತಿಗಟ್ಟ, ಸಿಂಗಟಗೆರೆ ಸೇರಿ ಡಿಸೆಂಬರ್ 2025ಕ್ಕೆ ಸುಮಾರು 17 ಕಟ್ಟಡಗಳು ಉದ್ಘಾಟನೆ ಆಗಲಿವೆ ಎಂದರು.
ಕ್ಷೇತ್ರದಲ್ಲಿ 16 ಅಂಗನವಾಡಿ ಕೇಂದ್ರಗಳು ಉದ್ಘಾಟನೆಗೆ ಸಜ್ಜಾಗಿದೆ. 20 ಲಕ್ಷ ರು. ವೆಚ್ಚದಲ್ಲಿ ಬೀರೂರಿನಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಯಾಗಿದೆ .ಕಡೂರಿನ ರಾಜೀವ್ ಗಾಂಧಿ ಬಡಾವಣೆ, ನರಬೋವಿ ಕಾಲೋನಿ, ಗಣಪತಿ ಪೆಂಡಾಲ್ ನಲ್ಲಿ ನಿರ್ಮಿಸಲಾಗುತ್ತಿದೆ. ಬಡವರಿಗೆ ಕಾಳಜಿ ಇಟ್ಟುಕೊಂಡು ರಾಜ್ಯ ಸರ್ಕಾರವು ಈ ಕೇಂದ್ರಗಳ ನಿರ್ಮಾಣ ಮಾಡಿ ಗರ್ಭಿಣಿಯರಿಗೆ ಉತ್ತಮ ಸೇವೆ ನೀಡುತ್ತಿವೆ ಎಂದರು.ಭದ್ರಾ ಉಪ ಕಣಿವೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬುವ ಕಾಮಗಾರಿ ಪ್ರಗತಿಯಲ್ಲಿದೆ ಈ ಕಾಮಗಾರಿ ಮುಗಿದ ನಂತರ ಕೆರೆ ಏರಿಯ ಅಚ್ಚು ಕಟ್ಟು ಕಾಮಗಾರಿ ಮಾಡಲಾಗುವುದು. ಉಳ್ಳಿ ನಾಗರಬಯಲು , ಔತನಹಳ್ಳಿ, ಬೀರಪ್ಪನಹಳ್ಳಿ, ಗೊಲ್ಲರಹಟ್ಟಿ ಬೈಲಿಗೆ ರಸ್ತೆಗಳ ನಿರ್ಮಾಣಕ್ಕೆ ಅದ್ಯತೆ ನೀಡಲಾಗುವುದು. ಈಗಾಗಲೇ ಮಾವಿನಹಳ್ಳಿ ರಸ್ತೆ 20 ಲಕ್ಷರೂ, ಕನ್ನೇನಹಳ್ಳಿಗೆ 10 ಲಕ್ಷ ರೂ ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ ಎಂದರು.
ಗ್ಯಾರಂಟಿ ಕಾರ್ಯಕ್ರಮಗಳಿಗೆ ಪ್ರತೀ ವರ್ಷ 60,000 ಸಾವಿರ ಕೋಟಿ ರು. ವ್ಯಯವಾಗುತ್ತಿದೆ. ಕಳೆದ ವರ್ಷ ಮುಜರಾಯಿ ಇಲಾಖೆಯಿಂದ ದೇವಾಲಯಗಳ ಅಭಿವೃದ್ದಿಗೆ 6.50 ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದು ಈ ವರ್ಷ ಸುಮಾರು 8 ಕೋಟಿ ರು. ತರುವ ಉದ್ದೇಶ ಇದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಶ್ರೀ ಚನ್ನಕೇಶವ, ಶ್ರೀ ಆಂಜನೇಯ, ಶ್ರೀ ಕರಿಯಮ್ಮ, ಶ್ರೀಮೈಲಾರ ಲಿಂಗಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಯಗಳ ಅಭಿವೃದ್ದಿಗೆ ಅನುದಾನ, ಮದಗದ ಕೆರೆ ನೀರು ಸರಾಗವಾಗಿ ಬರಲು ರಾಂಪುರವರೆಗೆ ಕಾಲುವೆ ನಿರ್ಮಾಣ, ಮಾವಿನಕಟ್ಟೆಯಿಂದ ಕಾಲುವೆ ನಿರ್ಮಾಣ ಮಾಡಿದರೆ ಔತನಹಳ್ಳಿ ಮತ್ತು ಹಿರಿಯಂಗಳ ಬಯಲಿಗೆ ನೀರು ಹರಿಸಲು ಕ್ರಮ, ಕಿರು ಆಸ್ಪತ್ರೆ ನಿರ್ಮಾಣಕ್ಕೆ 65 ಲಕ್ಷ ರ. ಮಂಜೂರು ಮಾಡಿಸಿದ್ದು ಸರ್ಕಾರದ ಮಟ್ಟದಲ್ಲಿ ಟೆಂಡರ್ ಮಾಡಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷೆ ಜಯಾಬಾಯಿ, ಸದಸ್ಯರಾದ ಸುನಿತಾ, ಮಂಜುಳಾ ಬಾಯಿ, ಷಡಾಕ್ಷರಿ, ಲತಾ ಹರೀಶ್, ತಾಪಂ ಸಹಾಯಕ ನಿರ್ದೇಶಕ ಕಲ್ಲಪ್ಪ, ಸಿಡಿಪಿಒ ಶಿವಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್, ಗ್ರಾಮದ ಹಿರಿಯರಾದ ಗಂಗಾಧರ್, ಹರೀಶ್, ಪ್ರವೀಣ್ ,ಪಂಚಾಯಿತಿ ಅಧಿಕಾರಿ ಮತ್ತು ಅಂಗನವಾಡಿ ಕಾರ್ಯಕರ್ತರು, ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.