ಸಾರಾಂಶ
ದೇವಲಾಪುರ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ರಾಜ್ಯ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಹಾಗೂ ಅಧ್ಯಕ್ಷ ಎನ್.ಜೆ.ರಾಜೇಶ್ ಹೇಳಿದರು.
ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದ ಶ್ರೀಲಕ್ಷ್ಮೀಕಾಂತ ದೇಗುಲದ ಮುಂಭಾಗ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಏರ್ಪಡಿಸಿದ್ದ ತಾಲೂಕು ಮಟ್ಟದ 4ನೇ ಸಮ್ಮೇಳನದಲ್ಲಿ ಮಾತನಾಡಿದರು.ಮಹಿಳೆಯರ ಸಮಾನತೆಗೆ ಸರ್ಕಾರದ ಯೋಜನೆಗಳು ಸಹಕಾರಿಯಾಗಿವೆ. ಜೊತೆಗೆ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಮಹಿಳಾ ಸ್ವ ಸಹಾಯ ಶಕ್ತಿಯನ್ನು ಸಂಘಟನಾತ್ಮಕವಾಗಿ ಬೆಳೆಸಲು ಸಹಕಾರ ನೀಡುತ್ತಿದೆ. ಮಹಿಳೆಯರು ಕೇವಲ ಕುಟುಂಬಕ್ಕೆ ಅಷ್ಟೇ ಅಲ್ಲದೇ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲೂ ಪ್ರತಿಭೆಗೆ ತಕ್ಕಂತೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದರು.
ಸಮಾಜದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ನಿಲ್ಲಿಸುವ ವಿರುದ್ಧ ಪ್ರತಿಯೊಬ್ಬರಲ್ಲಿಯೂ ಪ್ರತಿಭಟನೆಯ ಕಿಚ್ಚು ಬೆಳೆಯಬೇಕು. ನಮ್ಮ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳನ್ನು ನ್ಯಾಯಯುತವಾಗಿ ಹೋರಾಟ ಮಾಡುವ ಮುಖಾಂತರ ಗ್ರಾಮೀಣ ಭಾಗದಲ್ಲಿಯೂ ಸಂಘಟನೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷೆ ಡಿ.ಕೆ.ಲತಾ ಮಾತನಾಡಿ, ಮಹಿಳೆಯರ ಹಕ್ಕು ಬಾಧ್ಯತೆಗಳ ನಿಯಮಾನುಸಾರ ಬೇಡಿಕೆ ಈಡೇರಿಸಬೇಕು. ನರೇಗಾ ಯೋಜನೆ ಸಮರ್ಪಕವಾಗಿ ನಿಗದಿಯಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡರಾದ ಸುನೀತಾ ಮಾತನಾಡಿ, 600 ರು. ಕೂಲಿ ನಿಗದಿ, 200 ದಿನಗಳ ಕಾಲಾವಕಾಶ ನೀಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.ಸಮ್ಮೇಳನದ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷೆ ಪ್ರೇಮಮ್ಮ ನೆರವೇರಿಸಿದರು. ಗ್ರಾಪಂ ಸದಸ್ಯರಾದ ದಿವಾಕರ್, ರೈತ ಉತ್ಪಾದಕರ ಕಂಪನಿ ನಿರ್ದೇಶಕ ಬಾಲು, ಅನೇಕ ಮುಖಂಡರು ಹಾಜರಿದ್ದರು.
ನೂತನ ಸಮಿತಿ ರಚನೆ:ತಾಲೂಕು ಅಧ್ಯಕ್ಷರಾಗಿ ಪ್ರೇಮಮ್ಮ, ಕಾರ್ಯದರ್ಶಿ ವರಲಕ್ಷ್ಮೀ, ಖಜಾಂಚಿ ಮಂಜುಳಾ, ಉಪಾಧ್ಯಕ್ಷರಾಗಿ ರುದ್ರಮ್ಮ, ಗೌರಮ್ಮ, ಸಹ ಕಾರ್ಯದರ್ಶಿಗಳಾಗಿ ಸವಿತಾ, ವೆಂಕಟಲಕ್ಷ್ಮೀ, 12 ಮಂದಿ ನೂತನ ಸಮಿತಿ ಆಯ್ಕೆ ಮಾಡಲಾಯಿತು.