ಸಾರಾಂಶ
ಹಾವೇರಿ:ಸರ್ಕಾರದ ಯೋಜನೆಗಳ ಕುರಿತು ಅಲೆಮಾರಿ ಜನಾಂಗ ವಾಸಿಸುವ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರಕೈಗೊಳ್ಳಬೇಕು. ಅಲೆಮಾರಿ ಸಮುದಾಯಕ್ಕೆ ಪ್ರತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೂಚನೆ ನೀಡಿದರು.ಗುರುವಾರ ಜಿಲ್ಲೆಯ ಸವಣೂರ ತಾಲೂಕು ಡಂಬರಮುತ್ತೂರ ಗ್ರಾಮಕ್ಕೆ ತೆರಳಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಕೊರಮ, ಕೊರಚ ಮತ್ತು ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳಗಳಿಗೆ ಹಾಗೂ ಹಾವೇರಿಯ ನಾಗೇಂದ್ರನಮಟ್ಟಿಗೆ ಭೇಟಿ ನೀಡಿ, ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ, ಸುಡುಗಾಡು ಸಿದ್ದ, ಕೊರಮ ಮತ್ತು ಕೊರಚ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ ಮಾಡಿ ಅವರ ಕುಂದು-ಕೊರತೆ ಆಲಿಸಿ ಅವರು ಮಾತನಾಡಿದರು. ಈ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು. ಪ್ರತಿ ವರ್ಷ ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗುತ್ತದೆ. ರಾಜ್ಯದಲ್ಲಿ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಅಲೆಮಾರಿ ಸಮುದಾಯದವರಿಗಾಗಿ ರು.2 ಲಕ್ಷದವರೆಗೂ ಮನೆ ಕಟ್ಟಿಕೊಳ್ಳಲು ಅವಕಾಶವಿದೆ. ಈ ಯೋಜನೆಗಳ ಕುರಿತು ಸಮುದಾಯದ ಜನರಿಗೆ ಸಮರ್ಪಕ ಮಾಹಿತಿ ನೀಡುವುದರ ಜೊತೆಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಈ ವರೆಗೂ 10, 313 ಮನೆಗಳು ಮಂಜೂರಾಗಿದ್ದು, ಕೇವಲ 5000 ಮನೆಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಬಾಕಿ ಮನೆಗಳ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಿ ಗುರಿ ಸಾಧನೆ ಮಾಡಬೇಕು ಸೂಚನೆ ನೀಡಿದರು.ಸಾರ್ವಜನಿಕರ ದೂರು:ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸೌಲಭ್ಯ ನೀಡುತ್ತಿಲ್ಲ ಎಂದು ಸಮುದಾಯದವರು ಅಧ್ಯಕ್ಷರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈಗಾಗಲೇ ನೀಡಿದ ಗುರಿ ಸಾಧನೆ ಮಾಡಿಲ್ಲ. ಅಧಿಕಾರಿಗಳು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬಂದಿರುವ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಿ, ಹೊಸದಾಗಿ ಅರ್ಜಿ ಆಹ್ವಾನಿಸಿ ಎಂದು ತಿಳಿಸಿದರು.ಸ್ವಚ್ಛತೆಗೆ ಆದ್ಯತೆ ನೀಡಿ: ಅಲೆಮಾರಿ ಸಮುದಾಯ ವಾಸಿಸುವ ಪ್ರದೇಶಗಳ ಕುಡಿಯುವ ನೀರು, ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಾಣ ಮಾಡಿರುವುದಿಲ್ಲ, ಕಸ ವಿಲೇವಾರಿ, ನಿರ್ಮಾಣವಾದ ಚರಂಡಿಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದಿಲ್ಲ ಎಂಬ ಕುರಿತು ಸಾರ್ವಜನಿಕರು ಅಧ್ಯಕ್ಷರ ಗಮನಕ್ಕೆ ತಂದಾಗ, ಈ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸಮುದಾಯದ ಜನರಿಗೆ ಆಶ್ರಯ ಯೋಜನೆಯಡಿಯಲ್ಲಿ ನೂತನವಾಗಿ 24 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲಿ ಮನೆಗಳನ್ನು ಪೂರ್ಣಗೊಳಿಸಿ ಸಂಬಂಧಿಸಿದ ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳು ತಿಳಿಸಿದರು.