ಪುರಸಭೆಯಿಂದ ಸರ್ಕಾರಿ ಶಾಲೆ ದತ್ತು ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಭಂಡಾರಿ ಶ್ರೀನಿವಾಸ್

| Published : Jan 06 2025, 01:00 AM IST

ಪುರಸಭೆಯಿಂದ ಸರ್ಕಾರಿ ಶಾಲೆ ದತ್ತು ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬಡ ಮಕ್ಕಳು ಹೆಚ್ಚಾಗಿರುವ ಪಟ್ಟಣದ ಒಂದು ಸರ್ಕಾರಿ ಶಾಲೆಯನ್ನು ಪುರಸಭೆ ದತ್ತು ಪಡೆದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪ್ರಕಟಿಸಿದರು.

ಪಟ್ಟಣದ ಕೆ.ಎಲ್.ವಿ ವೃತ್ತದ ಬಳಿ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ

ಕನ್ನಡಪ್ರಭ ವಾರ್ತೆ, ಕಡೂರು

ಬಡ ಮಕ್ಕಳು ಹೆಚ್ಚಾಗಿರುವ ಪಟ್ಟಣದ ಒಂದು ಸರ್ಕಾರಿ ಶಾಲೆಯನ್ನು ಪುರಸಭೆ ದತ್ತು ಪಡೆದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪ್ರಕಟಿಸಿದರು.

ಪಟ್ಟಣದ ಕೆ.ಎಲ್.ವಿ ವೃತ್ತದ ಸಮೀಪ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದಿಂದ ನಡೆವ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಬಳಿಕ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಯಾವುದೇ ಕೆಲಸವಿದ್ದರೂ ಪುರಸಭೆ ಸಹಕಾರ ನೀಡಿ ಕನ್ನಡದ ತೇರನ್ನು ಎಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.ತಾಯಿ ಭುವನೇಶ್ವರಿ ಪುತ್ಥಳಿ ನಿರ್ಮಾಣಕ್ಕೆ ಕಸಾಪ ಮಹಿಳಾ ಘಟಕ ಒಂದೂವರೆ ವರ್ಷದಿಂದಲೂ ಬೇಡಿಕೆ ನೀಡಿತ್ತು ಅವರಿಗೆ ಎರಡೂ ಸ್ಥಳಗಳನ್ನು ಪುರಸಭೆ ನೀಡಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ಸ್ಥಳಗಳು ಕೈ ತಪ್ಪಿ ಇದೀಗ ವೃತ್ತದ ಬಳಿಯೆ ಭುವನೇಶ್ವರಿ ಪುತ್ಥಳಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ದುಬೈ, ಕೆನಡ ದೇಶಗಳಲ್ಲಿನ ಕನ್ನಡಿಗರು ಅದರಲ್ಲಿಯೂ ಕಡೂರಿನ ಜನತೆ ಅಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ಕನ್ನಡ ಭಾಷೆ, ಸಂಸ್ಕೃತಿಗಳ ನಮ್ಮ ಆಚಾರ ವಿಚಾರಗಳ ಬಗ್ಗೆ ಪ್ರಚಾರ ಮಾಡುತ್ತಿರುವುದು ಕನ್ನಡಿ ಗರಾದ ನಾವು ಅಭಿನಂದಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕಡೂರು ಪಟ್ಟಣದಲ್ಲಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಿರುವುದು ಮಹಿಳಾ ಘಟಕಕ್ಕೆ ಐತಿಹಾಸಿಕ ದಿನವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪನೆಗೆ ಜಿಲ್ಲಾ, ತಾಲೂಕು ಮಹಿಳಾ ಘಟಕಗಳು ಮುಂದಾಗಿದ್ದು ತಾವು ಸಹ ಅವರೊಂದಿಗೆ ಕೈ ಜೋಡಿಸುತ್ತೇವೆ. ಜಿಲ್ಲೆಯಲ್ಲಿ ಯುವ ಸಮ್ಮೇಳನವನ್ನು ಶೀಘ್ರವೇ ನಡೆಸಲು ಸಿದ್ಧತೆ ನಡೆದಿದೆ ಇದಕ್ಕೆ ಕನ್ನಡ ಮನಸ್ಸುಗಳು ಸಹಕಾರ ನೀಡಬೇಕು ಎಂದರು. ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಸತ್ಯನಾರಾಯಣ ಮಾತನಾಡಿ, ರಾಜ್ಯದಲ್ಲೇ ಮೊದಲ ಭಾರಿಗೆ ಮಹಿಳಾ ಘಟಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪಿತವಾಗಿದ್ದು, ತಾಲೂಕು ಘಟಕಗಳಿಂದ ಉತ್ತಮ ಕಾರ್ಯ ನಡೆಯುತ್ತಿವೆ. ಮಹಿಳೆ ಯರು ಸಕ್ರಿಯವಾಗಿ ಭಾಗವಹಿಸಿ ಕನ್ನಡ ನಾಡು, ನುಡಿ ಬಗ್ಗೆ ಚಿಂತನೆ ನಡೆಸುತ್ತಿದ್ದು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಭುವನೇಶ್ವರಿ ಪುತ್ಥಳಿ ಸ್ಥಾಪನೆಗೆ ಒತ್ತು ನೀಡುತ್ತಿದ್ದೇವೆ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ರವರಿಗೆ ಮಹಿಳಾ ಘಟಕ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಕೇಳಿದಾಗ ಒಪ್ಪಿಕೊಂಡು ಸ್ಥಳ ನೀಡಿ ನಿರ್ವಹಣೆ ಮಾಡಿಸಿದಕ್ಕೆ ಅವರನ್ನು ಕಸಾಪ ಅಭಿನಂದಿಸುತ್ತದೆ ಎಂದರು.

ತಾಲೂಕು ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಲತಾ ರಾಜಶೇಖರ್ ಮಾತನಾಡಿ, ಮಹಿಳಾ ಘಟಕವನ್ನು ಸಂಘಟಿಸುವ ಬಗ್ಗೆ ಹೊರನಾಡ ಕನ್ನಡಿಗರೂ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಎಲೆ ಮರೆಕಾಯಿಯಂತೆ ಜಾಗೃತಿ ಮೂಡಿಸುತ್ತಿರುವ ಅವರನ್ನು ಅಭಿನಂದಿಸಿದರು. ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಮರುಗುದ್ದಿ ಮನು, ಕಡೂರು ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಜಿಲ್ಲಾ ಮಹಿಳಾ ಘಟಕದ ಗೌರವ ಅಧ್ಯಕ್ಷೆ ನಿರ್ಮಲಾ ಮಚ್ಚೇಗೌಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಕುರಿತು ಮಾತನಾಡಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಕನ್ನಡ ಸಂಘಟನೆಗಳ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಕನ್ನಡ ಹಾಡುಗಳಿಗೆ ನೃತ್ಯ ಮಾಡಿ ಸೇರಿದ್ದವರ ಮನರಂಜಿಸಿದರು. ಶಾಸಕ ಕೆಎಸ್.ಆನಂದ್ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಮಾಡಿದರು.ಹಿರಿಯ ವಕೀಲ ಶಿವಕುಮಾರ್, ರೋಟೇರಿಯನ್ ರಾಘವೇಂದ್ರ, ಮಂಜುನಾಥ್, ರೂಪಾನಾಯ್ಕ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಹಾಜರಿದ್ದರು.

-- ಬಾಕ್ಸ್ ಸುದ್ದಿಗೆ--

ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ:

ನಮ್ಮ ಜಾಗದಲ್ಲಿ ನಮ್ಮ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಅಡ್ಡಿ ಮಾಡುವುದು ನಾಚಿಕೆ ಗೇಡಿನ ಸಂಗತಿ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಕಿಡಿ ಕಾರಿದರು. ಭಾನುವಾರ ಭುವನೇಶ್ವರಿ ಪ್ರತಿಮೆ ಅನಾವರಣ ಸಮಾರಂಭದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿ ಮಾತನಾಡಿ, ಬಹು ದೊಡ್ಡ ದಾಗಿ ಕನ್ನಡ, ನೆಲ, ಜಲಕ್ಕಾಗಿ ರಕ್ತ ಕೊಡುತ್ತೇವೆ ಎಂದು ನಮ್ಮಂತವರು ಭಾಷಣ ಬಿಗಿಯುತ್ತೇವೆ. ಆದರೆ ಪಟ್ಟಣದ ಕನ್ನಡ ವಿರೋಧಿಸುವ ವಿಕೃತ ಮನಸ್ಸುಗಳು ಕನ್ನಡ ತಾಯಿ ಪ್ರತಿಮೆ ಸ್ಥಾಪನೆಗೆ ಕಸಾಪ ಮಹಿಳಾ ಘಟಕ ಗುರುತಿಸಿದ್ದ ಪಟ್ಟಣದ ಎರಡು ಜಾಗಗಳಲ್ಲಿ ಇಲ್ಲಿ ಪ್ರತಿಮೆ ಬೇಡ ಎಂದು ಅಡ್ಡಿಪಡಿಸಿದ್ದು ವಿಪರ್ಯಾಸ. ಇದು ಕನ್ನಡ ತಾಯಿಗೆ ಮಾಡಿದ ಅಪಚಾರ ಎಂದರು.

5ಕೆಕೆಡಿಯು2.

ಕಡೂರು ಪಟ್ಟಣದ ಕೆಎಲ್‍ವಿ ವೃತ್ತದ ಸಮೀಪ ತಾ.ಕಸಾಪ ಮಹಿಳಾ ಘಟಕದಿಂದ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ನಡೆಯಿತು. ಶಾಸಕ ಕೆ.ಎಸ್.ಆನಂದ್ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸೂರಿ ಶ್ರೀನಿವಾಸ್,ಮಂಜುಳಾ ಚಂದ್ರು, ಸವಿತಾ ಸತ್ಯನಾರಾಯಣ, ಲತಾಚಂದ್ರಶೇಖರ್ ಇದ್ದರು.