ಶಾಸಕ ಆರಗ ಜ್ಞಾನೇಂದ್ರ ಆರಗ ಸಮೀಪದ ಹಿರೇಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಸಂಸ್ಥೆಯವರು ಕೊಡುಗೆಯಾಗಿ ನೀಡಿರುವ ಗ್ರಂಥಾಲಯಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ನೆರವು ಅತ್ಯಗತ್ಯವಾಗಿದ್ದು, ಈ ನಿಟ್ಟನಲ್ಲಿ ಕಳಕಳಿ ಹೊಂದಿರುವ ದಾನಿಗಳ ನೆರವು ಸ್ಮರಣೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಆರಗ ಸಮೀಪದ ಹಿರೇಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಸಂಸ್ಥೆಯವರು ನೀಡಿರುವ ಎಂಟು ಲಕ್ಷ ರು. ವೆಚ್ಚದ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಬೋಧನಾ ಸೌಲಭ್ಯವನ್ನು ಹೆಚ್ಚಿಸುವ ಅಗತ್ಯವಿದ್ದು, ಈ ಶಾಲೆಯ ಬಗೆಗಿನ ಸಂಸ್ಥೆಯವರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗನುಗುಣವಾಗಿ ಶಿಕ್ಷಕರ ಕೊರತೆ ನಡುವೆಯೂ ಸರ್ಕಾರಿ ಶಾಲೆಗಳ ಶೈಕ್ಷಣಿಕ ಸಾಧನೆ ಮೆಚ್ಚುವಂತಿದೆ. ಇದಕ್ಕೆ ಬಹುಮುಖ್ಯವಾಗಿ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಬಗೆಗಿನ ಕಾಳಜಿ ಪ್ರಶಂನೀಯವಾಗಿದೆ. ಅಂಕಾಲಜಿ ಸಂಸ್ಥೆಯವರು ನೀಡಿರುವ ಎಂಟು ಲಕ್ಷ ರು.ಗಳ ಆರ್ಥಿಕ ನೆರವಿನ ಹಣದಲ್ಲಿ ಕಟ್ಟಡದ ರಿಪೇರಿಗೂ ಸ್ವಲ್ಪ ಮೊತ್ತವನ್ನು ಬಳಸಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈಜೋಡಿಸುವ ಮನೋಭಾವದ ದಾನಿಗಳ ಸಂಖ್ಯೆಯೂ ಹೆಚ್ಚಳವಾದಲ್ಲಿ ಬಡ ಮಕ್ಕಳ ಭವಿಷ್ಯವೂ ಉಜ್ವಲವಾಗಲಿದೆ ಎಂದರು.ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಸಂಸ್ಥೆಯ ಡಾ.ಸುರೇಶ್, ಆರಗ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ರಮೇಶ್ ಹಾಗೂ ಪ್ರೇಮ, ಶಾಲಾಭಿವೃದ್ದಿ ಸಮಿತಿಯ ಉಮೇಶ್,ಡಾ.ರೂಹಿ ರಫಿಕ್, ದುರ್ಗಾದಾಸ್ ಮತ್ತು ನಾಗರಾಜ್ ಇದ್ದರು.