ಖಾಸಗಿ ಶಾಲೆ ಮೀರಿಸಿದ ಸರ್ಕಾರಿ ಶಾಲೆ: ಡಿಡಿಪಿಐ ಮೆಚ್ಚುಗೆ

| Published : Jun 16 2024, 01:57 AM IST / Updated: Jun 16 2024, 06:53 AM IST

ಖಾಸಗಿ ಶಾಲೆ ಮೀರಿಸಿದ ಸರ್ಕಾರಿ ಶಾಲೆ: ಡಿಡಿಪಿಐ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಹೆಚ್ಚಿನ ಕಲಿಕಾ ಸೌಲಭ್ಯ ಹೊಂದಿರುವ ಹಾಗೂ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುತ್ತಿರುವ ತಾಲೂಕಿನ ಹುಲ್ಲಿಕೇರಿ ಎಸ್.ಪಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ ಎಂದು ಡಿಡಿಪಿಐ ಬಿ.ಕೆ. ನಂದನೂರ ಮೆಚ್ಚುಗೆ ವ್ಯಕ್ತಪಡಿಸಿದರು.

  ಗುಳೇದಗುಡ್ಡ :  ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಹೆಚ್ಚಿನ ಕಲಿಕಾ ಸೌಲಭ್ಯ ಹೊಂದಿರುವ ಹಾಗೂ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯುತ್ತಿರುವ ತಾಲೂಕಿನ ಹುಲ್ಲಿಕೇರಿ ಎಸ್.ಪಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಳಿದೆಲ್ಲ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಬಿ.ಕೆ. ನಂದನೂರ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕಿನ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿ, ಗುಳೇದಗುಡ್ಡ ತಾಲೂಕಿನಲ್ಲಿ ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಗಳಲ್ಲಿಯೇ ಇದು ಪ್ರಥಮ ಸ್ಥಾನದಲ್ಲಿದೆ. ಗ್ರಾಮಸ್ಥರು ಶಾಲೆಗೆ ಕಂಪ್ಯೂಟರ್, ಪ್ರೊಜೆಕ್ಟರ್, ಸಿಸಿ ಕ್ಯಾಮೆರಾ ಕೊಟ್ಟಿರುವುದನ್ನು ನೋಡಿದರೆ ಇಲ್ಲಿನ ಶೈಕ್ಷಣಿಕ ವಾತಾವರಣ ಮೆಚ್ಚುವಂತಹದ್ದು. ಗುಣಾತ್ಮಕ ಶಿಕ್ಷಣ ನೀಡುವತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಕಾಳಜಿ ವಹಿಸುವ ಶಾಲಾ ಮುಖ್ಯ ಗುರುಗಳ, ಸಹ ಶಿಕ್ಷಕರ ಹಾಗೂ ಗ್ರಾಮಸ್ಥರ ಮನೋಭಾವನೆ, ಆಸಕ್ತಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ಶಾಲೆಗಳಲ್ಲಿಯೇ ಇಷ್ಟೊಂದು ಕಲಿಕಾ ಸೌಲಭ್ಯಗಳು, ಗುಣಾತ್ಮಕ ಶಿಕ್ಷಣ ಇರುವುದು ಅಪರೂಪ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ವಾತಾವರಣ ಹೀಗೆಯೇ ಆಗಬೇಕು ಎನ್ನುವುದೇ ನನ್ನ ಉದ್ದೇಶ ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯ 4 ಮತ್ತು 7, 8ನೇ ತರಗತಿ ಮಕ್ಕಳ ಜೊತೆ ಕಲಿಕಾ ವಿಷಯಗಳ ಕುರಿತು ಚರ್ಚಿಸಿದರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಮಕ್ಕಳು ಕರಾರುವಾಕ್‌ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಆರ್.ಬಿ.ಬೇನಾಳ ಮಾತನಾಡಿ, ಗ್ರಾಮಸ್ಥರ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಈ ಶಾಲೆಗೆ ತುಂಬಾ ಇದೆ. 418 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಗ್ರಾಮದ ಒಬ್ಬ ವಿದ್ಯಾರ್ಥಿಯೂ ಖಾಸಗಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ಹಾಗೂ ಗುಣಮಟ್ಟದ ಕಲಿಕೆ ಇದೆ. ಹಿಂದಿನ ವಿದ್ಯಾರ್ಥಿಗಳು ಕಂಪ್ಯೂಟರ್‌ ನೀಡಿದ್ದರಿಂದ ಸ್ಮಾರ್ಟ್‌ ಕ್ಲಾಸ್ ನಡೆಯುತ್ತಿವೆ. ಗುಣಾತ್ಮಕ ಶಿಕ್ಷಣ ಹಾಗೂ ಸುಂದರ ಶಾಲಾ ವಾತಾವರಣ ನಿರ್ಮಾಣದಲ್ಲಿ ಗ್ರಾಮಸ್ಥರ ಸಹಕಾರವೂ ಇದೆ. ಪ್ರಾಥಮಿಕ ಹಂತದ ನಂತರ ಇಲ್ಲಿಂದ ಮಕ್ಕಳು ಗುಳೇದಗುಡ್ಡದ ಪ್ರೌಢಶಾಲೆಗಳಿಗೆ ಹೋಗಬೇಕಾಗುತ್ತದೆ. ಇಲ್ಲಿಯೂ ಕೂಡ ಹೆಚ್ಚು ಮಕ್ಕಳಿರುವುದರಿಂದ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆ ಮಾಡುವಂತೆ ವಿನಂತಿಸಿಕೊಂಡರು. ಅದಕ್ಕೆ ಅಧಿಕಾರಿಗಳೂ ಸಮ್ಮತಿ ಸೂಚಿಸಿದರು.

ಶಿಕ್ಷಣ ಇಲಾಖೆಯ ಡಯಟ್ ಉಪನ್ಯಾಸಕ ಪಾಟೀಲ, ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಸಂಗಮೇಶ ಕಲ್ಲೂರ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.