ಸಾರಾಂಶ
ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಸರಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿಜ್ಞಾನ ಶಿಕ್ಷಕ ಅಶೋಕ ಉಂಡಿ ಒಬ್ಬ ಮಾದರಿ ಶಿಕ್ಷಕರಾಗಿದ್ದಾರೆ.
ಶಿಕ್ಷಕ ವೃತ್ತಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಬ್ರಹ್ಮಚಾರಿಯಾಗಿ ಮಕ್ಕಳ ಏಳಿಗೆಯೇ ನನ್ನ ಏಳಿಗೆ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ.ಸರ್ಕಾರಿ ಶಾಲೆ ಎಂದರೆ ಜನ ಮೂಗು ಮುರಿಯುತ್ತಾರೆ. ಆದರೆ ಸೂಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕೆ ಕಾರಣ ಅಲ್ಲಿರುವ ಶಿಕ್ಷಕರು. ಶಾಲೆಯಲ್ಲಿ ಸುಸಜ್ಜಿತವಾದ ವಿಜ್ಞಾನ ಮತ್ತು ಗಣಿತ ಪ್ರಯೋಗಶಾಲೆಯನ್ನು ನಿರ್ಮಿಸಿದ್ದಾರೆ. 7 ತಿಂಗಳ ಮಗುವಿನ ದೇಹ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ದೇಹದ ಅಂಗಾಂಗಗಳನ್ನು ಸಂಸ್ಕರಿಸಿ ಹಾಗೆ ಗಣಿತಕ್ಕೆ ಸಂಬಂಧಿಸಿದ ಹಲವಾರು ಪರಿಕರಗಳನ್ನು ತಾವೇ ತಯಾರಿಸಿ ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಖಾಸಗಿ ಶಾಲೆ ಅಥವಾ ಯಾವುದೇ ಕಾಲೇಜು ಮಟ್ಟದಲ್ಲಿಯೂ ಇಲ್ಲದಂತ ಪ್ರಯೋಗ ಶಾಲೆಯನ್ನು ಸರಕಾರಿ ಶಾಲೆಯ ನಿರ್ಮಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
ಜೊತೆಗೆ ವಿಜ್ಞಾನ ಶಿಕ್ಷಕರಾಗಿರುವುದರಿಂದ ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸಲು ಪವಾಡ ರಹಸ್ಯ ಬಯಲು ಎಂಬ ಕಾರ್ಯಕ್ರಮವನ್ನು ನೀಡಿದ್ದಾರೆ. ನಕಲಿ ಬಾಬಾಗಳ ಪವಾಡಗಳ ಹಿಂದಿರುವ ವಿಜ್ಞಾನದ ರಹಸ್ಯವನ್ನು ಜನರಿಗೆ ತಿಳಿಸಿ ಜನರನ್ನು ಜಾಗೃತಗೊಳಿಸಿದ್ದಾರೆ. 60ಕ್ಕೂ ಹೆಚ್ಚು ಪವಾಡಗಳ ರಹಸ್ಯ ಬಯಲು ಮಾಡಿದ್ದಾರೆ.ಆಕಾಶ ಕಾಯಗಳ ಬಗ್ಗೆ ಅಪರಿಮಿತ ಆಸಕ್ತಿ ಇರುವ ಇವರು ಆಸಕ್ತಿಯನ್ನು ಮಕ್ಕಳಿಗೆ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಆಕಾಶ ವೀಕ್ಷಣೆ ಎಂಬ ಸೃಜನಶೀಲ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಿಗೆ ವಿಜ್ಞಾನದ ಆಸಕ್ತಿ ಇರುವವರಿಗೆ ಆಕಾಶಕಾಯಗಳ ಬಗ್ಗೆ ರಾಶಿ ನಕ್ಷತ್ರಗಳ ಬಗ್ಗೆ ಗ್ರಹಣಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತಾರೆ. ಉತ್ತಮ ಕ್ರೀಡಾಪಟುವಾಗಿದ್ದಾರೆ.