ಸರ್ಕಾರಿ ಶಾಲೆ ಶಿಕ್ಷಕರೂ ಬಡಮಕ್ಕಳಿಗೆ ಕಾಳಜಿ ತೋರಲಿ

| Published : Jul 29 2025, 01:01 AM IST

ಸಾರಾಂಶ

ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಆದಾಯ ಸ್ವಲ್ಪ ಭಾಗ ಸಾಮಾಜಿಕ ಸೇವೆಗೆ ಮೀಸಲಿಟ್ಟ ಹಣದಲ್ಲಿ ಕಳೆದ ೫ ವರ್ಷಗಳಲ್ಲಿ ಹರಿಹರ ತಾಲೂಕಿನ ೧೫೩ ಶಾಲೆಗಳ ಮಕ್ಕಳಿಗೆ ನೋಟ್ ಬುಕ್, ಶೌಚಾಲಯ, ವಿಜ್ಞಾನ ಉಪಕರಣ, ಕ್ರೀಡಾ ಸಾಮಗ್ರಿ, ನಲಿ-ಕಲಿ ಪೀಠೋಪಕರಣ, ಬ್ಯಾಗುಗಳು, ವಿಶ್ರಾಂತಿ ಕೊಠಡಿಗಳಿಗೆ ಅನುದಾನ ನೀಡಿದ್ದಾರೆ. ಇದು ಬಡಮಕ್ಕಳ ಸಂತಸದ ಕಲಿಕೆಗೆ ಕಾರಣವಾಗಿದೆ ಎಂದು ಧೂಳೆಹೊಳೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶರಣ್‌ಕುಮಾರ್ ಹೆಗಡೆ ಹೇಳಿದ್ದಾರೆ.

- ಮಲೇಬೆನ್ನೂರಿನಲ್ಲಿ ದಾನಿಗಳಿಗೆ ಗೌರವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಶರಣ್ ಹೆಗಡೆ ಮನವಿ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಆದಾಯ ಸ್ವಲ್ಪ ಭಾಗ ಸಾಮಾಜಿಕ ಸೇವೆಗೆ ಮೀಸಲಿಟ್ಟ ಹಣದಲ್ಲಿ ಕಳೆದ ೫ ವರ್ಷಗಳಲ್ಲಿ ಹರಿಹರ ತಾಲೂಕಿನ ೧೫೩ ಶಾಲೆಗಳ ಮಕ್ಕಳಿಗೆ ನೋಟ್ ಬುಕ್, ಶೌಚಾಲಯ, ವಿಜ್ಞಾನ ಉಪಕರಣ, ಕ್ರೀಡಾ ಸಾಮಗ್ರಿ, ನಲಿ-ಕಲಿ ಪೀಠೋಪಕರಣ, ಬ್ಯಾಗುಗಳು, ವಿಶ್ರಾಂತಿ ಕೊಠಡಿಗಳಿಗೆ ಅನುದಾನ ನೀಡಿದ್ದಾರೆ. ಇದು ಬಡಮಕ್ಕಳ ಸಂತಸದ ಕಲಿಕೆಗೆ ಕಾರಣವಾಗಿದೆ ಎಂದು ಧೂಳೆಹೊಳೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶರಣ್‌ಕುಮಾರ್ ಹೆಗಡೆ ಹೇಳಿದರು.

ಪಟ್ಟಣದ ಮಾರುತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಜೋಯಸ್ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ದೇಣಿಗೆ ನೀಡಿದ ದಾನಿಗಳಿಗೆ ಗೌರವಿಸುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಶಾಲೆಗೆ ₹೨.೫೦ ಲಕ್ಷ ಮೌಲ್ಯದ ನೆರವು ನೀಡಿದ ದಾನಿಗಳಿಗೆ ಗೌರವಿಸುವ ಸಮಾರಂಭ ಹಮ್ಮಿಕೊಂಡಿರುವುದು ಇತರರಿಗೆ ದಾನ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಸರ್ಕಾರಿ ಶಾಲೆಗಳ ಶಿಕ್ಷಕರೂ ಬಡಮಕ್ಕಳ ಕಾಳಜಿ ಜತೆಗೆ ದಾನಿಗಳನ್ನು ಗುರುತಿಸುವ, ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.

ವಿದ್ಯಾಸಂಸ್ಥೆ ನಿರ್ದೇಶಕ ಎಂ.ಕೆ. ರಾಮಶೆಟ್ಟಿ ಮಾತನಾಡಿ, ೧೯೯೨ರಲ್ಲಿ ಆರಂಭವಾದ ಮಾರುತಿ ಶಾಲೆ ಇಲ್ಲಿಯವರೆಗೂ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಕೆಲವರು ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಗೆ ದಾನ ಕೊಟ್ಟಿರುವ ವ್ಯಕ್ತಿಗಳ ವಿಶಾಲ ಮನೋಭಾವನೆ ಶ್ಲಾಘಿಸಿದರು. ಹಣ ಉಳ್ಳವರಿಗೆ ದಾನ ಮಾಡುವ ಮನಸ್ಸು ಇರುವುದಿಲ್ಲ. ಮನಸ್ಸು ಇದ್ದವರಲ್ಲಿ ಹಣ ಇರುವುದಿಲ್ಲ. ಈ ಎರಡೂ ಗುಣ ಹೊಂದಿರುವವರನ್ನು ಗುರುತಿಸಿ ಅವರಿಂದ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಶರಣ್‌ ಕುಮಾರ್ ಹೆಗಡೆ ಗುಣ ಮೆಚ್ಚುವಂಥದು ಎಂದರು.

ಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಜೋಯಿಸ್ ಮಾತನಾಡಿ, ನಮ್ಮ ಶಾಲೆಯಲ್ಲೂ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಕಲಿಕೆಮಟ್ಟ ಬಗ್ಗೆ ಕಾಳಜಿ ವಹಿಸಿ, ಅಗತ್ಯವಿದ್ದಾಗ ಶಾಲೆಗೆ ಬಂದು ಶಿಕ್ಷಕರ ಜೊತೆಗೆ ಚರ್ಚಿಸಿ, ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಡಿ. ಮುರುಳೀಧರ್ ರಾವ್, ದಾನಿಗಳಾದ ಸಂಸ್ಥೆಯ ನಿರ್ದೇಶಕ ಎಂ.ವಿ. ಗೋವಿಂದರಾಜ ಶೆಟ್ಟಿ, ಮಹಾವೀರ ಭೋಗಾರ್, ಶಿಕ್ಷಕ ಚಂದ್ರಶೇಖರ್, ವೈ.ಚಂದ್ರಕುಮಾರ್, ಶಿಕ್ಷಕ ಪಿ. ರಮೇಶ್ ಕೆ. ಭೀಮಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಎಚ್.ಎಂ. ಸದಾನಂದ, ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ನಾಗೇಂದ್ರಪ್ಪ ಶಿಕ್ಷಕರು, ಪೋಷಕರು ಹಾಜರಿದ್ದರು.

- - -

(ಕೋಟ್‌) ಪೋಷಕರು ಮತ್ತು ಶಿಕ್ಷಕರು ಒಂದೇ ರಥದ 2 ಚಕ್ರಗಳಂತೆ. ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು ಮುಖ್ಯ ಜವಾಬ್ದಾರಿಯಾಗಿದೆ.

- ದಂಡಿ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ, ಎಸ್‌ಬಿಕೆಎಂ ಶಾಲೆ

- - -

-ಚಿತ್ರ೧: ಮಾರುತಿ ಶಾಲೆಯಲ್ಲಿ ಶಿಕ್ಷಕರ ಸಂಘಟನೆಯ ಶರಣ್‌ ಕುಮಾರ್ ಹೆಗಡೆ ಅವರನ್ನು ಗೌರವಿಸಲಾಯಿತು.