ದಾಖಲಾತಿ ಹೆಚ್ಚಿಸದಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ

| Published : Aug 03 2024, 12:38 AM IST

ದಾಖಲಾತಿ ಹೆಚ್ಚಿಸದಿದ್ದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಹೆಚ್ಚಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿ ಶಿಕ್ಷಕರ ನೇಮಕಾತಿ ನಿಲ್ಲಿಸುವ ಸಾಧ್ಯತೆಯೂ ಹೆಚ್ಚಿದೆ ಎಂದು ಶಿಕ್ಷಣ ಇಲಾಖೆ ಜಿಲ್ಲಾ ನಿರ್ದೇಶಕ ಎಚ್.ಕೆ. ಪಾಂಡು ಸಲಹೆ ನೀಡಿದರು. ಹೊಳೆನರಸೀಪುರ ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾ. ಘಟಕ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶಾಲೆಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯದ ಜತೆಗೆ ಪೋಷಕರಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೇವೆ ಎಂಬ ಮನಸ್ಥಿತಿ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ದಯವಿಟ್ಟು ಈ ವಿಷಯದಲ್ಲಿ ಪರಿವರ್ತನೆಯ ನಿರ್ಣಯ ಕೈಗೊಂಡು ಮುಂದಿನ ದಿನಗಳಲ್ಲಿ ದಾಖಲಾತಿ ಹೆಚ್ಚಿಸುವಲ್ಲಿ ಪ್ರಗತಿ ಸಾಧಿಸಿ ಎಂದು ಶಿಕ್ಷಣ ಇಲಾಖೆ ಜಿಲ್ಲಾ ನಿರ್ದೇಶಕ ಎಚ್.ಕೆ. ಪಾಂಡು ಸಲಹೆ ನೀಡಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾ. ಘಟಕ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಳನ್ನು ಹೆಚ್ಚಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿ ಶಿಕ್ಷಕರ ನೇಮಕಾತಿ ನಿಲ್ಲಿಸುವ ಸಾಧ್ಯತೆಯೂ ಹೆಚ್ಚಿದೆ ಎಂದು ಆತಂಕ ಹೊರಹಾಕಿದರು.

ಶಾಲೆ ಒಂದರ ಶಿಕ್ಷಕ ನಗರ ಪ್ರದೇಶಕ್ಕೆ ಆಗಮಿಸುವ ಸಲುವಾಗಿ ೫ ಮಕ್ಕಳಿದ್ದ ಶಾಲೆಗೆ ದಾಖಲಾತಿ ಒಂದೂ ಇಲ್ಲವೆಂದು ವರದಿ ಮಾಡುತ್ತಾರೆ, ಇದರ ಬಗ್ಗೆ ಗ್ರಾಮೀಣ ಪ್ರದೇಶದ ಜನರು ತಿಳಿಸಿದ ನಂತರ ಕೈಗೊಂಡ ಕಾರ್ಯದಿಂದ ೨೦ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ ಎಂದು ತಿಳಿಸಿ, ಆ ಶಿಕ್ಷಕರ ಧೋರಣೆಯನ್ನು ಟೀಕಿಸಿದರು.

ಸಂಸ್ಕಾರ ಕಲಿಸಿ: ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದೆ, ಕಾರಣವೇನೆಂದರೆ ಮಾತೃ ಹೃದಯ ಹೊಂದಿರುವ ಮಹಿಳೆ ಶಿಕ್ಷಕಿಯಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡುವ ಜತೆಗೆ ಸಂಸ್ಕಾರವನ್ನು ಕಲಿಸಿ, ಭವಿಷ್ಯ ರೂಪಿಸುವಲ್ಲಿ ಒಳ್ಳೆಯ ಬುನಾದಿ ಹಾಕಿಕೊಡುತ್ತಾರೆ ಎಂಬ ಇಂಗಿತದೊಂದಿಗೆ ನೇಮಿಸಿಕೊಂಡಿದ್ದಾರೆ ಎಂದು ಭಾವಿಸಿದ್ದೇವೆ, ಆದರೆ ಕೆಲವು ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ, ಆ ಶಾಲೆಗಳಲ್ಲಿ ನೀಡುವ ಪ್ರಾಜೆಕ್ಟ್ ವರ್ಕ್‌ಗಳನ್ನು ರಾತ್ರಿ ೧೧ ಗಂಟೆ ತನಕ ಸಿದ್ಧಪಡಿಸುತ್ತಾರೆ, ಆದರೆ ಸರ್ಕಾರಿ ಶಾಲೆಯಲ್ಲಿ ಒಂದು ಪ್ರಾಜೆಕ್ಟ್ ವರ್ಕ್‌ಗಳನ್ನು ಮಾಡಿಸಲ್ಲ, ಇಂತಹ ಪರಿಸ್ಥಿತಿಯಲ್ಲಿ ಕಲಿಕೆ ಸಾಗುತ್ತಿರುವಾಗ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಹಿಳಾ ಶಿಕ್ಷಕರು ಹೆಚ್ಚಿನ ಬದ್ಧತೆಯೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಸರ್ಕಾರಿ ಶಾಲೆ ಉಳಿಸಿ: ಇಂದು ೭ನೇ ತರಗತಿ ವಿದ್ಯಾರ್ಥಿ ಹೈಯರ್ ಪ್ರೈಮರಿ ಸ್ಕೂಲ್ ಹಾಗೂ ತಂದೆ ತಾಯಿ ಹೆಸರನ್ನು ಇಂಗ್ಲೀಷಿನಲ್ಲಿ ಬರೆಯಲು ಬರೊಲ್ಲ ರೀ, ಎಂದು ತಿಳಿಸಿ, ಶಾಲೆಗಳ ದಾಖಲಾತಿಯ ಕುಂಠಿತದ ಬಗ್ಗೆ ಅಂಕಿ ಅಂಶಗಳನ್ನು ನೀಡಿ, ಇದೇ ಸ್ಥಿತಿ ಮುಂದುವರಿದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಸರ್ಕಾರ ನಮ್ಮ ಜೀವನ ರೂಪಿಸಿಕೊಳ್ಳಲು ಯಾವುದೇ ಲೋಪವಿಲ್ಲದ್ದಂತೆ ಸಕಲ ಸೌಲಭ್ಯಗಳನ್ನು ನೀಡಿದೆ, ಅದೇ ರೀತಿ ನಾವು ಸಹ ನಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಸರ್ಕಾರಿ ಶಾಲೆಗಳನ್ನು ಉಳಿಸೋಣವೆಂದು ಕರೆಕೊಟ್ಟರು.

ಡೆಂಘೀ ಬಗ್ಗೆ ಎಚ್ಚರ: ಡೆಂಘೀ ಜ್ವರ ಉಲ್ಪಣಿಸುತ್ತಿದ್ದು, ತರಗತಿಗಳಲ್ಲಿ ಸೊಳ್ಳೆ ನಿಯಂತ್ರಣ ಸಾಧನಗಳನ್ನು ಬಳಸಿ, ವಿದ್ಯಾರ್ಥಿಗಳಿಗೆ ಜ್ವರ ಇದ್ದಲ್ಲಿ ಹೆಚ್ಚಿನ ಕಾಳಜಿ ತೋರುವಂತೆ ಪೋಷಕರಿಗೆ ತಿಳಿಸಿ ಮತ್ತು ಗ್ರಾ.ಪಂ. ಪಿಡಿಒ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಂದರು.

ಶಿಕ್ಷಕಿ ಜಯಶೀಲ ಅವರು ಪ್ರಧಾನ ಭಾಷಣ ಮಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ೧೦ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಅಣ್ಣಪ್ಪ, ಗೌರವಾಧ್ಯಕ್ಷ ರಾಜಶೇಖರ್, ತಾಲೂಕು ಘಟಕ ಅಧ್ಯಕ್ಷ ಯತೀಶ್ ಎನ್.ಎಸ್. ಅಧಿಕಾರಿಗಳಾದ ಪುಷ್ಪಲತಾ, ಶಾರದಾ, ರಾಮಚಂದ್ರ, ಬಿ.ಕಾಳೇಗೌಡ, ರವಿಪ್ರಕಾಶ್, ರಾಮಚಂದ್ರಪ್ಪ, ಶಿಕ್ಷಕರ ಸಂಘದ ನಿರ್ದೇಶಕರಾದ ಕೆ.ಟಿ.ರವಿ., ನಾಗರಾಜು, ಶೇಖರ್, ಚಂದ್ರಕಲಾ ಡಿ, ಮಹಾಲಿಂಗ, ಮಲ್ಲರಾಜೇಗೌಡ, ನಾಗರತ್ನಮ್ಮ, ಲೀಲಾವತಿ, ಮಂಜುನಾಥ್, ಬೋಗೇಶ್ ಇತರರು ಇದ್ದರು.