ತಾರತಮ್ಯವಿಲ್ಲದೇ ಸಮಾನತೆಯಡಿಯಲ್ಲಿ ಶಿಕ್ಷಣ ದೊರಕುವ ಕೇಂದ್ರಗಳೆಂದರೆ ಆಯಾ ಊರಿನ ಅಥವಾ ಗ್ರಾಮಗಳ ಸರಕಾರಿ ಶಾಲೆಗಳು. ಇವು ಪ್ರತಿ ಹಳ್ಳಿಯ ಆತ್ಮಗಳಿದ್ದಂತೆ ಎಂದು ಚಲನಚಿತ್ರ ನಿರ್ದೇಶಕ ಅರುಣ ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳ ಪಾತ್ರ ಅತ್ಯಮೂಲ್ಯ. ಸರಕಾರಿ ಉಚಿತ ಕೊಡುಗೆಗಳ ಜೊತೆಗೆ ಸಾರ್ವಜನಿಕರು ನೀಡುವ ಉಚಿತ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದರು.
ಕನ್ನಡಪ್ರಭ ವಾರ್ತೆ ಆಲೂರು
ಬಡವ- ಬಲ್ಲಿದ, ಜಾತಿ, ಧರ್ಮ, ಲಿಂಗಗಳ ತಾರತಮ್ಯವಿಲ್ಲದೇ ಸಮಾನತೆಯಡಿಯಲ್ಲಿ ಶಿಕ್ಷಣ ದೊರಕುವ ಕೇಂದ್ರಗಳೆಂದರೆ ಆಯಾ ಊರಿನ ಅಥವಾ ಗ್ರಾಮಗಳ ಸರಕಾರಿ ಶಾಲೆಗಳು. ಇವು ಪ್ರತಿ ಹಳ್ಳಿಯ ಆತ್ಮಗಳಿದ್ದಂತೆ ಎಂದು ಚಲನಚಿತ್ರ ನಿರ್ದೇಶಕ ಅರುಣ ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು.ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳೂರು ಇಲ್ಲಿ ‘ಪುಟ್ಟಗೂಡಿನ ಪಟ್ಟದರಸಿ’ ಚಲನಚಿತ್ರ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನಮ್ಮ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಈ ಶಾಲೆಗೆ ನಮ್ಮ ಚಿತ್ರತಂಡದಿಂದ ಪ್ರತಿವರ್ಷ ಮಕ್ಕಳ ಕಲಿಕೆಗೆ ಸಹಾಯ ಮಾಡುವ ತೀರ್ಮಾನವನ್ನು ಮಾಡಿದ್ದೇವೆ. ಸರಕಾರಿ ಶಾಲೆಗಳು ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳ ಪಾತ್ರ ಅತ್ಯಮೂಲ್ಯ. ಸರಕಾರಿ ಉಚಿತ ಕೊಡುಗೆಗಳ ಜೊತೆಗೆ ಸಾರ್ವಜನಿಕರು ನೀಡುವ ಉಚಿತ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದರು.ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ, ಸರಕಾರಿ ಶಾಲೆಗಳ ಉನ್ನತಿಗಾಗಿ ‘ಪುಟ್ಟಗೂಡಿನ ಪಟ್ಟದರಸಿ’ ಚಿತ್ರತಂಡ ಶ್ರಮಿಸುತ್ತಿರುವುದು ಶ್ಲಾಘನೀಯ. ಸ್ವಾರ್ಥವನ್ನೇ ಹೊದ್ದುಮಲಗಿರುವ ಬಹುತೇಕ ಮನಸ್ಸುಗಳಿಗೆ ಇಂತಹ ನಿಸ್ವಾರ್ಥ ಸೇವೆಯು ಮಾದರಿಯಾಗುತ್ತದೆ. ನಾನು, ನನ್ನದು ಎಂದು ಯೋಚಿಸುವ ಬದಲು ನಾವು ನಮ್ಮದು ಎಂದು ಆಲೋಚಿಸಿ ಕಾರ್ಯತತ್ಪರರಾಗುವ ಇಂತಹ ವ್ಯಕ್ತಿಗಳು ಮಹತ್ವವೆನಿಸುತ್ತಾರೆ ಎಂದರು.ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರುಣ ಕುಮಾರ್ ಕೇವಲ ಚಲನಚಿತ್ರ ನಿರ್ದೇಶಕನಲ್ಲ, ಒಬ್ಬ ದಿಟ್ಟ ಪತ್ರಕರ್ತ, ಸಂಘಟಕ, ಪ್ರತಿಭಾನ್ವಿತ ಉತ್ಸಾಹಿ ಯುವಕ. ಕಳೆದ ನಾಲ್ಕೈದು ವರ್ಷಗಳಿಂದ ಸಕಲೇಶಪುರ ಹೆತ್ತೂರು ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿವರ್ಷ ಎಪ್ಪತ್ತರಿಂದ ಎಂಬತ್ತು ಸಾವಿರ ಮೊತ್ತದ ನೋಟ್ ಪುಸ್ತಕಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡುತ್ತಿದ್ದಾರೆ. ಕಳೆದ ವರ್ಷದಿಂದ ನಮ್ಮ ಶಾಲೆಗೂ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಸರಕಾರಿ ಶಾಲೆಗಳ ಔನ್ನತ್ಯದ ಬಗ್ಗೆ ಇವರಿಗಿರುವ ಕಾಳಜಿ ಆದರ್ಶಪ್ರಾಯ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷ ಟಿ.ಇ. ಧರ್ಮ, ಹಿರಿಯ ಶಿಕ್ಷಕಿ ವಿ.ರವಿತ, ಅತಿಥಿ ಶಿಕ್ಷಕಿ ಎ.ಎಸ್. ರೇಖಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.