ಮಲೆನಾಡಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಸರ್ಕಾರಿ ಶಾಲೆ ಮುಚ್ಚಬಾರದು; ಕಣಿವೆ ವಿನಯ್ ಸಲಹೆ

| Published : Nov 24 2024, 01:48 AM IST

ಮಲೆನಾಡಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಸರ್ಕಾರಿ ಶಾಲೆ ಮುಚ್ಚಬಾರದು; ಕಣಿವೆ ವಿನಯ್ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಮಲೆನಾಡಿನ ಭಾಗದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಆ ಶಾಲೆಗಳನ್ನು ಮುಚ್ಚದೆ ಉಳಿಸಿ ಕೊಳ್ಳಬೇಕು ಎಂದು ಕಣಿವೆ ನಾಗಚಂದ್ರ ಪ್ರತಿಷ್ಠಾನ ಅಧ್ಯಕ್ಷ ಹಾಗೂ ದಾನಿಗಳಾದ ಕಣಿವೆ ವಿನಯ್‌ ಸಲಹೆ ನೀಡಿದರು.

ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ- ವಲಯ ಮಟ್ಟದ ಪ್ರತಿಭಾ ಕಾರಂಜಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಲೆನಾಡಿನ ಭಾಗದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಆ ಶಾಲೆಗಳನ್ನು ಮುಚ್ಚದೆ ಉಳಿಸಿ ಕೊಳ್ಳಬೇಕು ಎಂದು ಕಣಿವೆ ನಾಗಚಂದ್ರ ಪ್ರತಿಷ್ಠಾನ ಅಧ್ಯಕ್ಷ ಹಾಗೂ ದಾನಿಗಳಾದ ಕಣಿವೆ ವಿನಯ್‌ ಸಲಹೆ ನೀಡಿದರು.

ಬುಧವಾರ ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಹಾಗೂ ಶೆಟ್ಟಿಕೊಪ್ಪ ಕ್ಲಸ್ಠರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಲೆನಾಡು ಭಾಗದ ಸರ್ಕಾರಿ ಶಾಲೆಯಲ್ಲಿ ಒಂದು ಮಗು ಬರುತ್ತಿ ದ್ದರೂ ಅದನ್ನು ಮುಚ್ಚದೆ ಶಾಲೆ ನಡೆಸಬೇಕು. ಈ ಭಾಗದ ಗ್ರಾಮಗಳಲ್ಲಿ ಇರುವ ಮನೆಗಳ ಸಂಖ್ಯೆಯೇ ಕಡಿಮೆ. ಬಯಲು ಸೀಮೆಗೂ, ಮಲೆನಾಡಿಗೂ ಬಹಳ ವ್ಯತ್ಯಾಸವಿದೆ. ಸರ್ಕಾರಿ ಶಾಲೆ ಮುಚ್ಚದೆ ಹಾಗೇ ಉಳಿಸಿಕೊಂಡರೆ ನಂತರದ ವರ್ಷ ಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಬಹುದು. ಈ ಸಮಸ್ಯೆ ಬಗ್ಗೆ ಮಲೆನಾಡು ಭಾಗದ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.

ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಅನೇಕ ಸಂದರ್ಭದಲ್ಲಿ ಮಕ್ಕಳಿಗಿಂತ ಪೋಷಕರಿಗೇ ಇಂಗ್ಲೀಷ್‌ ಹಾಗೂ ಖಾಸಗಿ ಶಾಲೆ ವ್ಯಾಮೋಹ ಜಾಸ್ತಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಸಂಸ್ಕಾರವಂತರಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ಓದಿ ಲಕ್ಷಾಂತರ ಸಂಪಾದನೆ ಮಾಡುತ್ತಿರುವ ಮಕ್ಕಳೇ ಇಂದು ತಮ್ಮ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಿದ್ದಾರೆ. ಖಾಸಗಿ ಶಾಲೆಗಳು ಪಾಶ್ಚಾತ್ಯ ಶಿಕ್ಷಣ ಅನುಕರಣೆ ಮಾಡಿ ಕೇವಲ ಅಂಕ ಗಳಿಸು‍ವತ್ತ ಮಾತ್ರ ಗಮನ ನೀಡಿ ಸಂಸ್ಕಾರ ಕಲಿಸುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌.ಪುಷ್ಪಾ ಮಾತನಾಡಿ, ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಈಗ 100 ವರ್ಷ ತುಂಬಿದ ಸಂಭ್ರಮದಲ್ಲಿದೆ. ಇಲ್ಲಿನ ಪ್ರತಿಯೊಬ್ಬ ಗ್ರಾಮಸ್ಥರು ಇದೇ ಶಾಲೆಯಲ್ಲಿ ಕಲಿತು ದೊಡ್ಡ, ದೊಡ್ಡ ಸ್ಥಾನಕ್ಕೆ ಏರಿದ್ದಾರೆ. ಈ ಶಾಲೆ 100 ವರ್ಷ ಮುಗಿಸಲು ಈ ಗ್ರಾಮದ ಪ್ರತಿಯೊಬ್ಬರ ಶ್ರಮ ಇದೆ ಎಂದರು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ ಎಲ್ಲವೂ ಬೇಕಾಗುತ್ತದೆ. ಮಕ್ಕಳಲ್ಲಿ ಯಾವ ಪ್ರತಿಭೆ ಅಡಗಿದೆ ಎಂದು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರ ಪ್ರತಿಭಾ ಕಾರಂಜಿ ಹಮ್ಮಿಕೊಂಡಿದೆ. ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಲೆಗೆ ಜಾಗ ದಾನವಾಗಿ ನೀಡಿದ್ದ ಸೂರ್ಯನಾರಾಯಣ ಭಟ್‌, ಶ್ರೀಧರ್‌ ಭಟ್‌,ನಾಗರಾಜ ಭಟ್, ರಂಗಮಂದಿರಕ್ಕೆ ಜಾಗ ದಾನ ನೀಡಿದ ಕಣಿವೆ ಡಾ. ನವೀನ್‌ ನಾಗರಾಜ್‌, ಕಣಿವೆ ವಿನಯ ಅವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಕಂಡ ಶಾಲೆಯ ಅಭಿವೃದ್ದಿಗೆ ಶ್ರಮಿಸಿದ್ದ ಗ್ರಾಮದ ಮುಖಂಡರನ್ನು ಅಭಿನಂದಿಸಲಾಯಿತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುತ್ತಳಿಕೆ ಕೇಶವ ಮತ್ತು ತಂಡದವರಿಂದ ಹಾಸ್ಯ ಸಂಜೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಸೋಮಶೇಖರ್ ವಹಿಸಿದ್ದರು. ಮುತ್ತಿನಕೊಪ್ಪ ಗ್ರಾಪಂ ಸದಸ್ಯೆ ಅರ್ಪಿತ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಮಾಜಿ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಕೆ.ಎಸ್‌. ಪದ್ಮನಾಭ, ಮಾಜಿ ಸದಸ್ಯರಾದ ಕೆ.ವಿ.ವಿಜೇಂದ್ರ, ಕೆ.ಎನ್.ಪ್ರುಪುಲ್ಲ, ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಿ. ನಂಜುಂಡಪ್ಪ, ತಾ.ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಶೋಕ್‌,ಮುಖ್ಯ ಶಿಕ್ಷಕ ಚೆನ್ನಪ್ಪ,ಸಿ.ಆರ್.ಪಿ.ತಿಮ್ಮಮ್ಮ ಶಾಲಾ ಮುಖ್ಯೋಪಾಧ್ಯಾಯ ಚೆನ್ನಪ್ಪ, ನಾಗೇಶ್‌ , ಮಂಜುನಾಥ್ ಮತ್ತಿತರರು ಇದ್ದರು.